

ನ್ಯೂಯಾರ್ಕ್: ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (53 ರನ್, 32 ಎಸೆತ, 4 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮತ್ತು ಬೌಲರ್ಗಳ ಸಂಟಿತ ದಾಳಿ ನೆರವಿನಿಂದ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಏಕೈಕ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 60 ರನ್ಗಳಿಂದ ಗೆಲುವು ಸಾಧಿಸಿದೆ. ಈ ಆಲ್ರೌಂಡ್ ನಿರ್ವಹಣೆಯೊಂದಿಗೆ ಭಾರತ ಭರ್ಜರಿ ಅಭ್ಯಾಸ ನಡೆಸಿದ್ದು, ಜೂನ್ 5ರಂದು ಐರ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಪಂದ್ಯದ ಸವಾಲಿಗೆ ಸಜ್ಜಾಗಿದೆ.
ನಾಸೌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ, ಪಂತ್ ಹಾಗೂ ಸೂರ್ಯಕುಮಾರ್ (31) ನಡೆಸಿದ ಜತೆಯಾಟದ ಬಲದಿಂದ 5 ವಿಕೆಟ್ಗೆ 182 ರನ್ಗಳಿಸಿತು. ಪ್ರತಿಯಾಗಿ 41 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ತತ್ತರಿಸಿದ ಬಾಂಗ್ಲಾ, ಅಂತಿಮವಾಗಿ 9 ವಿಕೆಟ್ಗೆ 122 ರನ್ ಗಳಿಸಲಷ್ಟೇ ಶಕ್ತವಾಯಿತು. ಎಡಗೈ ವೇಗಿ ಅರ್ಷದೀಪ್ (12ಕ್ಕೆ 2) ಆರಂಭದಲ್ಲೇ 2 ವಿಕೆಟ್ ಕಬಳಿಸಿ ಮಿಂಚಿದರು.
ಪಂತ್ ಅರ್ಧಶತಕದಾಸರೆ: ನಾಯಕ ರೋಹಿತ್ ಶರ್ಮ (23) ಜತೆಯಾಗಿ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ (1) ನಿರಾಸೆ ಮೂಡಿಸಿದರು. ಪಂತ್ ಸ್ಫೋಟಕ ಬ್ಯಾಟಿಂಗ್ನಿಂದ 32 ಎಸೆತದಲ್ಲಿ ಅರ್ಧಶತಕ ಸಿಡಿಸಿ ನಿವೃತ್ತಿಗೊಂಡರು. ಶಿವಂ ದುಬೆ (14) ರನ್ಗಳಿಸಲು ಪರದಾಡಿದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಸಹ ಔಟಾದರು. ಕೊನೆಯಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ (40* ರನ್, 23 ಎಸೆತ, 2 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಏರಿಸಿದರು. ಕೊನೇ 5 ಓವರ್ಗಳಲ್ಲಿ ಭಾರತ 52 ರನ್ ದೋಚಿತು.
ಆಡದ ಕೊಹ್ಲಿ: ಶುಕ್ರವಾರವಷ್ಟೇ ತಂಡ ಕೂಡಿಕೊಂಡಿರುವ ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯದಿಂದ ಹೊರಗುಳಿದರು. ಯಶಸ್ವಿ ಜೈಸ್ವಾಲ್ ಕೂಡ ಬ್ಯಾಟಿಂಗ್ಗೆ ಇಳಿಯಲಿಲ್ಲ.
ಭಾರತ: 5 ವಿಕೆಟ್ಗೆ 182 (ರೋಹಿತ್ 23, ಸ್ಯಾಮ್ಸನ್ 1, ಪಂತ್ 52, ಸೂರ್ಯಕುಮಾರ್ 31, ಶಿವಂ ದುಬೆ 14, ಹಾರ್ದಿಕ್ ಪಾಂಡ್ಯ 40, ಜಡೇಜಾ 4, ಮಹಮುದುಲ್ಲಾ 16ಕ್ಕೆ 1, ತನ್ವೀರ್ 29ಕ್ಕೆ 1, ಮಹಿದಿ 22ಕ್ಕೆ 1). ಬಾಂಗ್ಲಾದೇಶ: 9 ವಿಕೆಟ್ಗೆ 122 (ತಂಜಿದ್ 17, ಲಿಟನ್ ದಾಸ್ 6, ಮಹಮುದುಲ್ಲಾ 40, ಶಕೀಬ್ 28, ಅರ್ಷದೀಪ್ 12ಕ್ಕೆ 2, ದುಬೆ 13ಕ್ಕೆ 2, ಬುಮ್ರಾ 12ಕ್ಕೆ 1, ಹಾರ್ದಿಕ್ 30ಕ್ಕೆ 1, ಸಿರಾಜ್ 17ಕ್ಕೆ 1, ಅಕ್ಷರ್ 10ಕ್ಕೆ 1).