ಬರೋಬ್ಬರಿ 26ನೇ ಬಾರಿ ವಿಶ್ವ ಕಿರೀಟ ಗೆದ್ದ ಕನ್ನಡಿಗ ಪಂಕಜ್​ ಆಡ್ವಾಣಿ!

advani web
Published on

ದೋಹಾ: ಭಾರತದ ಅನುಭವಿ ಕ್ಯೂ ಆಟಗಾರ ಹಾಗೂ ಕನ್ನಡಿಗ ಪಂಕಜ್​ ಆಡ್ವಾಣಿ ಐಬಿಎಸ್​ಎಫ್​​ ವಿಶ್ವ ಬಿಲಿಯರ್ಡ್ಸ್​ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಅವರು 26ನೇ ಬಾರಿ ವಿಶ್ವ ಚಾಂಪಿಯನ್​ ಪಟ್ಟವೇರಿದ ವಿಶಿಷ್ಟ ಸಾಧನೆ ಮಾಡಿದ್ದಾರೆ. ಭಾರತದಲ್ಲಿ ಬೇರೆ ಯಾವ ಕ್ರೀಡಾಪಟು ಕೂಡ ಇದಕ್ಕಿಂತ ಅರ್ಧದಷ್ಟು ಸಲವೂ ವಿಶ್ವ ಕಿರೀಟ ಗೆದ್ದುಕೊಂಡ ದೃಷ್ಟಾಂತವಿಲ್ಲ. ಏಕದಿನ ವಿಶ್ವಕಪ್​ನಲ್ಲಿ ಭಾರತಕ್ಕೆ ವಿಶ್ವ ಚಾಂಪಿಯನ್​ ಪಟ್ಟ ತಪ್ಪಿದ ನಿರಾಸೆಯನ್ನೂ ಪಂಕಜ್​ ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಿದ್ದಾರೆ.

ಬೆಂಗಳೂರಿನ ತಾರೆ ಪಂಕಜ್​ ಆಡ್ವಾಣಿ ಮಂಗಳವಾರ ನಡೆದ ಫೈನಲ್​ ಪಂದ್ಯದಲ್ಲಿ ದೇಶಬಾಂಧವ ಸೌರವ್​ ಕೊಠಾರಿ ವಿರುದ್ಧ 1000&416 ಅಂತರದಿಂದ ಗೆಲುವು ದಾಖಲಿಸಿದರು. ಕಳೆದ ವರ್ಷ ಕೌಲಾಲಂಪುರದಲ್ಲಿ ನಡೆದ ಅಂಕ ಮಾದರಿಯ ಟೂರ್ನಿಯಲ್ಲೂ ಆಡ್ವಾಣಿ, ಕೊಠಾರಿ ವಿರುದ್ಧವೇ ಗೆದ್ದು 25ನೇ ವಿಶ್ವ ಕಿರೀಟ ಒಲಿಸಿಕೊಂಡಿದ್ದರು. 20 ವರ್ಷಗಳ ಹಿಂದೆ ಸ್ನೂಕರ್​ನಲ್ಲಿ ಮೊಟ್ಟಮೊದಲ ಬಾರಿ ವಿಶ್ವ ಕಿರೀಟ ಗೆದ್ದಿದ್ದ ಪಂಕಜ್​, 2005ರಲ್ಲಿ ಬಿಲಿಯರ್ಡ್ಸ್​ನಲ್ಲಿ ಮೊದಲ ಬಾರಿ ವಿಶ್ವ ಚಾಂಪಿಯನ್​ ಪಟ್ಟವೇರಿದ್ದರು.

ದೀರ್ಘ ಪ್ರಕಾರದಲ್ಲಿ ಅವರಿಗೆ ಇದು 9ನೇ ವಿಶ್ವ ಪ್ರಶಸ್ತಿಯಾಗಿದೆ. ಅಂಕ ಮಾದರಿಯಲ್ಲೂ 8 ಬಾರಿ ವಿಶ್ವ ಚಾಂಪಿಯನ್​ ಪಟ್ಟವೇರಿದ್ದಾರೆ. ತಂಡ ಮಾದರಿಯಲ್ಲೂ ಒಮ್ಮೆ ವಿಶ್ವ ಚಾಂಪಿಯನ್​ ತಂಡದ ಭಾಗವಾಗಿದ್ದಾರೆ. 38 ವರ್ಷದ ಪಂಕಜ್​ ಆಡ್ವಾಣಿ ಸೆಮೀಸ್​ನಲ್ಲಿ ಮತ್ತೋರ್ವ ದೇಶಬಾಂಧವ ರೂಪೇಶ್​ ಷಾ ಎದುರು 900&273ರಿಂದ ಗೆದ್ದಿದ್ದರು.

ಗೆಲುವುಗಳು ನನಗೆ ಹೊಸದಲ್ಲ. ಹಿಂದೆಯೂ ಹಲವು ಬಾರಿ ಗೆದ್ದಿರುವೆ. ಆದರೆ ಹಲವಾರು ಗಂಟೆಗಳ ಅಭ್ಯಾಸ, ಮಾನಸಿಕ-ದೈಹಿಕ ಪರಿಶ್ರಮಗಳ ಬಳಿಕ ವರ್ಷದಿಂದ ವರ್ಷಕ್ಕೆ ಇದೇ ಸಾಧನೆಯನ್ನು ಪುನರಾವರ್ತಿಸುವುದು ನಿಜಕ್ಕೂ ಶ್ರೇಷ್ಠ ಅನುಭವ. ಸ್ಥಿರತೆಯೇ ಯಶಸ್ಸಿನ ನಿಜವಾದ ಮುದ್ರೆ. ಯಾವಾಗಲೂ ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆದ್ದುತರುವುದು ಹೆಚ್ಚು ಪ್ರೇರಣೆ ನೀಡುತ್ತದೆ ಎಂದು ಪಂಕಜ್​ ಆಡ್ವಾಣಿ ಹೇಳಿದ್ದಾರೆ.

ಪಂಕಜ್​ 26 ವಿಶ್ವ ಪ್ರಶಸ್ತಿಗಳು

*ವಿಶ್ವ ಬಿಲಿಯರ್ಡ್ಸ್​ (ಅಂಕ ಮಾದರಿ): 8 (2005, 2008, 2014, 2016, 2017, 2018, 2019, 2022)

*ವಿಶ್ವ ಬಿಲಿಯರ್ಡ್ಸ್​ (ದೀರ್ಘ ಮಾದರಿ): 9 (2005, 2007, 2008, 2009, 2012, 2014, 2015, 2018, 2023)

*ವಿಶ್ವ ತಂಡ ಬಿಲಿಯರ್ಡ್ಸ್​ ಚಾಂಪಿಯನ್​ಷಿಪ್​: 1 (2014)

*ವಿಶ್ವ ಸ್ನೂಕರ್​ ಚಾಂಪಿಯನ್​ಷಿಪ್​: 3 (2003, 2015, 2017)

*ವಿಶ್ವ 6-ರೆಡ್​ ಸ್ನೂಕರ್​: 3 (2015, 2014, 2021)

*ವಿಶ್ವ ಸ್ನೂಕರ್​ ತಂಡ ಚಾಂಪಿಯನ್​ಷಿಪ್​: 2 (2018, 2019)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net