ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜತೆಗಿನ ಭಿನ್ನಾಭಿಪ್ರಾಯ: ಕೋಚ್ ಹುದ್ದೆ ತ್ಯಜಿಸಿದ ಗ್ಯಾರಿ ಕರ್ಸ್ಟನ್

New Project (1)
Published on

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನ ಏಕದಿನ ಹಾಗೂ ಟಿ20 ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಗ್ಯಾರಿ ಕರ್ಸ್ಟನ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಏಪ್ರಿಲ್‌ನಲ್ಲಿ 2 ವರ್ಷಗಳ ಅವಧಿಯ ಒಪ್ಪಂದದ ಮೇಲೆ ನೇಮಕಗೊಂಡಿದ್ದ ಕರ್ಸ್ಟನ್ ಆರೇ ತಿಂಗಳಿನಲ್ಲಿ ಪದತ್ಯಾಗ ಮಾಡಿದ್ದಾರೆ. ಅವರ ಸ್ಥಾನವನ್ನು ಟೆಸ್ಟ್ ಕೋಚ್ ಜೇಸನ್ ಗಿಲೆಸ್ಪಿ ತುಂಬಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

56 ವರ್ಷದ ಕರ್ಸ್ಟನ್ ಅವರ ಹಠಾತ್ ರಾಜೀನಾಮೆಗೆ ಪಿಸಿಬಿ ಸೂಕ್ತ ಕಾರಣ ನೀಡದಿದ್ದರೂ, ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ಪ್ರವಾಸಗಳಿಗೆ ಪಾಕ್ ತಂಡದ ಆಯ್ಕೆ, ನೂತನ ನಾಯಕ ನೇಮಿಸುವ ಮುನ್ನ ಕೋಚ್ ಅಭಿಪ್ರಾಯವನ್ನು ಪಿಸಿಬಿ ಪಡೆಯಲಿಲ್ಲ ಎನ್ನಲಾಗಿದೆ. ತಂಡದ ಆಯ್ಕೆಯಲ್ಲಿ ಕೋಚ್ ಅಧಿಕಾರವನ್ನು ಹಿಂಪಡೆದಿರುವ ಪಿಸಿಬಿ ನಿರ್ಧಾರದಿಂದಾಗಿ ಕರ್ಸ್ಟನ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ. 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ಆಗಿದ್ದ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್, ಪಾಕಿಸ್ತಾನ ಕೋಚ್ ಹುದ್ದೆ ವಹಿಸಿಕೊಳ್ಳುವ ಮುನ್ನ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಪಾಕ್ ತಂಡದ ಒಂದೂ ಏಕದಿನ ಪಂದ್ಯಕ್ಕೆ ತರಬೇತಿ ನೀಡದೆ ಕರ್ಸ್ಟನ್ ನಿರ್ಗಮಿಸುತ್ತಿದ್ದಾರೆ.

ಆಯ್ಕೆ ಸಮಿತಿಯಿಂದ ಮಾತ್ರ ತಂಡದ ಆಯ್ಕೆ ನಡೆಯಲಿದೆ, ತರಬೇತುದಾರರ ಯಾವುದೇ ಪಾತ್ರವಿಲ್ಲ ಎಂಬ ನಿಯಮದಿಂದ ಗಿಲ್ಲೆಸ್ಪಿ ಕೂಡ ಅಸಮಾಧಾನ ಹೊಂದಿದ್ದು, ಅವರು ಶೀಘ್ರದಲ್ಲೇ ರಾಜೀನಾಮೆ ನೀಡಬಹುದು ಎಂದು ವರದಿಯಾಗಿದೆ. ಆಸ್ಟ್ರೇಲಿಯಾದ ಪ್ರವಾಸಕ್ಕೆ ಮಾತ್ರ ಸೀಮಿತ ಓವರ್‌ಗಳ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವುದಾಗಿ ಗಿಲ್ಲೆಸ್ಪಿ, ಪಿಸಿಬಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net