ಪಾಕಿಸ್ತಾನ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆಗೆ ವೀರೋಚಿತ ಸೋಲು

pak web
Published on

ರಾವಲ್ಪಿಂಡಿ: ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ (112 ರನ್, 116 ಎಸೆತ, 11 ಬೌಂಡರಿ, 3 ಸಿಕ್ಸರ್) ಭರ್ಜರಿ ಶತಕದ ನಡುವೆಯೂ ಪ್ರವಾಸಿ ಜಿಂಬಾಬ್ವೆ ತಂಡ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 26 ರನ್‌ಗಳಿಂದ ವೀರೋಚಿತ ಸೋಲು ಕಂಡಿದೆ. ಈ ಪಂದ್ಯದೊಂದಿಗೆ 2023ರ ಏಕದಿನ ವಿಶ್ವಕಪ್‌ಗೆ ಅರ್ಹತಾ ಕಾದಾಟವಾಗಿರುವ ಐಸಿಸಿ ಸೂಪರ್ ಲೀಗ್‌ಗೆ ಚಾಲನೆ ಲಭಿಸಿದೆ. ಈ ಗೆಲುವಿಗೆ ಪಾಕಿಸ್ತಾನ ತಂಡ 10 ಅಂಕ ಸಂಪಾದಿಸಿ ಶುಭಾರಂಭ ಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ, ಇಮಾಮ್ ಉಲ್ ಹಕ್ (58) ಮತ್ತು ಹ್ಯಾರಿಸ್ ಸೋಹೈಲ್ (71) ಅರ್ಧಶತಕದಿಂದ 8 ವಿಕೆಟ್‌ಗೆ 281 ರನ್ ಪೇರಿಸಿತು. ಇದಕ್ಕೆ ಪ್ರತಿಯಾಗಿ ಜಿಂಬಾಬ್ವೆ ತಂಡ ಬ್ರೆಂಡನ್ ಟೇಲರ್ ಶತಕದ ಬಲದಿಂದ ಗೆಲುವಿನತ್ತ ಮುನ್ನಡೆದಿತ್ತು. ಆದರೆ ಇನಿಂಗ್ಸ್‌ನ 47ನೇ ಓವರ್‌ನಲ್ಲಿ ಟೇಲರ್ ಔಟ್ ಆಗುವುದರೊಂದಿಗೆ ಜಿಂಬಾಬ್ವೆ ದಿಢೀರ್ ಕುಸಿತ ಕಂಡು 49.4 ಓವರ್‌ಗಳಲ್ಲಿ 255 ರನ್‌ಗೆ ಆಲೌಟ್ ಆಯಿತು. ವೇಗಿಗಳಾದ ಶಹೀನ್ ಷಾ ಅಫ್ರಿದಿ (49ಕ್ಕೆ 5) ಮತ್ತು ವಹಾಬ್ ರಿಯಾಜ್ (41ಕ್ಕೆ 4) ಜಿಂಬಾಬ್ವೆಗೆ ಕಡಿವಾಣ ಹಾಕಿದರು.

ಈ ಜಯದೊಂದಿಗೆ ಪಾಕಿಸ್ತಾನ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ 2ನೇ ಏಕದಿನ ಪಂದ್ಯ ಭಾನುವಾರ ರಾವಲ್ಪಿಂಡಿಯಲ್ಲೇ ನಡೆಯಲಿದೆ.

ಪಾಕಿಸ್ತಾನ: 8 ವಿಕೆಟ್‌ಗೆ 281 (ಇಮಾಮ್ ಉಲ್ ಹಕ್ 58, ಅಬಿದ್ ಅಲಿ 21, ಬಾಬರ್ ಅಜಮ್ 19, ಹ್ಯಾರಿಸ್ ಸೋಹೈಲ್ 71, ರಿಜ್ವಾನ್ 14, ಅಶ್ರ್ 23, ಇಮಾದ್ ವಾಸಿಂ 34*, ಚಿಸೊರೊ 31ಕ್ಕೆ 2, ಮುಜರಬಾನಿ 39ಕ್ಕೆ 2), ಜಿಂಬಾಬ್ವೆ: 49.4 ಓವರ್‌ಗಳಲ್ಲಿ 255 (ಚಿಬಾಬ 13, ಎರ್ವಿನ್ 41, ಬ್ರೆಂಡನ್ ಟೇಲರ್ 112, ಮಡೆವೆರ್ 55, ಶಹೀನ್ ಷಾ ಅಫ್ರಿದಿ 49ಕ್ಕೆ 5, ವಹಾಬ್ ರಿಯಾಜ್ 41ಕ್ಕೆ 4).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net