

ಕರಾಚಿ: ನಾಯಕ ನಿಕೋಲಸ್ ಪೂರನ್ (64 ರನ್, 37 ಎಸೆತ, 2 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನಿರ್ವಹಣೆಯ ನಡುವೆಯೂ ವೆಸ್ಟ್ ಇಂಡೀಸ್ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಮಣಿದಿದೆ. ಇದರಿಂದ ಪಾಕ್ 3-0ಯಿಂದ ಸರಣಿ ಕ್ಲೀನ್‌ಸ್ವೀಪ್ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ವಿಂಡೀಸ್ 3 ವಿಕೆಟ್‌ಗೆ 207 ರನ್ ಪೇರಿಸಿತು. ಪ್ರತಿಯಾಗಿ ಪಾಕ್, ಮೊಹಮದ್ ರಿಜ್ವಾನ್ (87 ರನ್, 45 ಎಸೆತ, 10 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ ಬಾಬರ್ ಅಜಮ್ (79ರನ್, 53 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಕಿಕೊಟ್ಟ ಭದ್ರ ಬುನಾದಿಯಿಂದ 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 208 ರನ್ ಪೇರಿಸಿ ಜಯಿಸಿತು. ರಿಜ್ವಾನ್-ಬಾಬರ್ ಜೋಡಿ ಮೊದಲ ವಿಕೆಟ್‌ಗೆ 158 ರನ್ ಜತೆಯಾಟವಾಡಿತು.
ಬ್ರೆಂಡನ್ ಕಿಂಗ್ (43) ಮತ್ತು ಶಮರ್ ಬ್ರೂಕ್ಸ್ (49) ಪವರ್‌ಪ್ಲೇಯಲ್ಲಿ 66 ರನ್ ಸೇರಿಸಿ ಬಿರುಸಿನ ಆರಂಭ ಒದಗಿಸಿದರು. ಬಳಿಕ ಪೂರನ್ ಮತ್ತು ಡರೇನ್ ಬ್ರಾವೊ (34*) 4ನೇ ವಿಕೆಟ್‌ಗೆ 49 ಎಸೆತಗಳಲ್ಲಿ 93 ರನ್ ದೋಚಿದರು.
ಕಾಡಿದ ಕರೊನಾ, ಏಕದಿನ ಸರಣಿ ಮುಂದಕ್ಕೆ
ವಿಂಡೀಸ್ ತಂಡದ ಮೂವರು ಆಟಗಾರರ ಸಹಿತ ಮತ್ತೆ ಐವರು ಸದಸ್ಯರು ಕರೊನಾ ಸೋಂಕಿತರಾದ ನಡುವೆಯೂ ಗುರುವಾರ ನಿಗದಿಯಂತೆ ಅಂತಿಮ ಟಿ20 ಪಂದ್ಯ ಆಡುವಂತೆ ಪಾಕ್ ಕ್ರಿಕೆಟ್ ಮಂಡಳಿ ಪ್ರವಾಸಿ ತಂಡದ ಮನವೊಲಿಸಿತು. ಆದರೆ ಏಕದಿನ ಸರಣಿಯನ್ನು ಮುಂದಿನ ವರ್ಷದ ಜೂನ್‌ಗೆ ಮುಂದೂಡಲಾಗಿದೆ. ಈ ಮುನ್ನ ಪ್ರವಾಸದ ಆರಂಭದಲ್ಲೂ ವಿಂಡೀಸ್ ತಂಡದ ಮೂವರು ಆಟಗಾರರು ಪಾಸಿಟಿವ್ ಆಗಿದ್ದರು.
ವೆಸ್ಟ್ ಇಂಡೀಸ್: 3 ವಿಕೆಟ್‌ಗೆ 207 (ಕಿಂಗ್ 43, ಬ್ರೂಕ್ಸ್ 49, ಪೂರನ್ 64, ಬ್ರಾವೊ 34*, ವಾಸಿಂ 44ಕ್ಕೆ 2). ಪಾಕಿಸ್ತಾನ: 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 208 (ರಿಜ್ವಾನ್ 87, ಬಾಬರ್ 79, ಆಸಿಫ್ ಅಲಿ 21*, ಒಡೆನ್ ಸ್ಮಿತ್ 34ಕ್ಕೆ 1, ಡ್ರೇಕ್ಸ್ 37ಕ್ಕೆ 1). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಮೊಹಮದ್ ರಿಜ್ವಾನ್.