ಕಿರಿಯರ ಏಷ್ಯಾಕಪ್‌ನಲ್ಲಿ ಭಾರತಕ್ಕೆ ಶಾಕ್ ನೀಡಿದ ಪಾಕ್: 19 ವಯೋಮಿತಿ ತಂಡದಲ್ಲಿ ವೈಭವ್ ಏಕೆ ಆಡುತ್ತಿಲ್ಲ ಗೊತ್ತಾ?

ಎಡಗೈ ಬ್ಯಾಟರ್ ಅರ್ಜುನ್ ರಜಪೂತ್ (107 ರನ್, 85 ಎಸೆತ, 11 ಬೌಂಡರಿ, 5 ಸಿಕ್ಸರ್) ಸಾಹಸಯುತ ಶತಕದ ಹೊರತಾಗಿಯೂ ಭಾರತ ತಂಡ 19 ವಯೋಮಿತಿ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 3 ವಿಕೆಟ್‌ಗಳ ವೀರೋಚಿತ ಸೋಲು ಅನುಭವಿಸಿತು. ಇದರೊಂದಿಗೆ ಭಾರತ ತಂಡ ಎ ಗುಂಪಿನ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಅಗ್ರಸ್ಥಾನಕ್ಕೇರಿದ ಪಾಕ್ ಗುಂಪಿನ ಮೊದಲ ತಂಡವಾಗಿ ಸೆಮಿಫೈನಲ್ ಸ್ಥಾನ ಬಹುತೇಕ ಖಾತ್ರಿ ಪಡಿಸಿಕೊಂಡಿದೆ.
ಅರ್ಜುನ್ ರಜಪೂತ್
ಅರ್ಜುನ್ ರಜಪೂತ್ಬಿಸಿಸಿಐ ಚಿತ್ರ
Published on: 

ಅಲ್ ಅಮಿರತ್ (ಓಮನ್): ಎಡಗೈ ಬ್ಯಾಟರ್ ಅರ್ಜುನ್ ರಜಪೂತ್ (107 ರನ್, 85 ಎಸೆತ, 11 ಬೌಂಡರಿ, 5 ಸಿಕ್ಸರ್) ಸಾಹಸಯುತ ಶತಕದ ಹೊರತಾಗಿಯೂ ಭಾರತ ತಂಡ 19 ವಯೋಮಿತಿ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 3 ವಿಕೆಟ್‌ಗಳ ವೀರೋಚಿತ ಸೋಲು ಅನುಭವಿಸಿತು. ಇದರೊಂದಿಗೆ ಭಾರತ ತಂಡ ಎ ಗುಂಪಿನ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಅಗ್ರಸ್ಥಾನಕ್ಕೇರಿದ ಪಾಕ್ ಗುಂಪಿನ ಮೊದಲ ತಂಡವಾಗಿ ಸೆಮಿಫೈನಲ್ ಸ್ಥಾನ ಬಹುತೇಕ ಖಾತ್ರಿ ಪಡಿಸಿಕೊಂಡಿದೆ.

ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ಲಕ್ಷ್ಯ ರಾಯ್‌ಚಾಂದನಿ ನಿರ್ಧಾರ ಕೈಕೊಟ್ಟಿತು. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ (23) ಜತೆಗೆ ಟೀಮ್ ಇಂಡಿಯಾ ಮಾಜಿ ನಾಯಕ-ಕೋಚ್ ರಾಹುಲ್ ದ್ರಾವಿಡ್ ಕಿರಿಯ ಪುತ್ರ ಅನ್ವಯ್ ದ್ರಾವಿಡ್ (10) ಸಹಿತ 86 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. ಆಗ, ಪಂಜಾಬ್‌ನ 19 ವರ್ಷದ ಅರ್ಜುನ್ ರಜಪೂತ್ ಬಿರುಸಿನ ಶತಕ ಹಾಗೂ ಕೆಳ ಕ್ರಮಾಂಕದಲ್ಲಿ ಕಾವ್ಯ ಪರೇಶ್ ಪಟೇಲ್ (23) ಉಪಯುಕ್ತ ಆಟದ ನೆರವಿನಿಂದ 46.3 ಓವರ್‌ಗಳಲ್ಲಿ ಸ್ಪರ್ಧಾತ್ಮಕ 208 ರನ್‌ಗಳಿಗೆ ಭಾರತ ಆಲೌಟ್ ಆಯಿತು.

ಪ್ರತಿಯಾಗಿ ಮನಲ್ ಚೌಹಣ್ (32ಕ್ಕೆ 3) ದಾಳಿಗೆ ಸಿಲುಕಿದ ಪಾಕ್ 61 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತು. ಆಗ, 7ನೇ ಕ್ರಮಾಂಕದ ಬ್ಯಾಟರ್ ಹಮ್ಜಾ ಜಹೂರ್ (100* ರನ್, 108 ಎಸೆತ, 10 ಬೌಂಡರಿ, 3 ಬೌಂಡರಿ) ಕೆಳ ಕ್ರಮಾಂಕದ ಬ್ಯಾಟರ್‌ಗಳ ಜತೆಗೂಡಿ ಚೇಸಿಂಗ್ ಯಶಸ್ವಿಗೊಳಿಸಿದರು. ಪಾಕ್ 48.1 ಓವರ್‌ಗಳಲ್ಲಿ 7 ವಿಕೆಟ್‌ಗೆ 209 ರನ್‌ಗಳಿಸಿ ಗೆದ್ದು ಬೀಗಿತು. ಕಿರಿಯರ ಏಷ್ಯಾಕಪ್‌ನಲ್ಲಿ ಪಾಕ್ ವಿರುದ್ಧದ ಹಿಂದಿನ 7 ಮುಖಾಮುಖಿಗಳಲ್ಲಿ ಭಾರತಕ್ಕೆ ಎದುರಾದ 5ನೇ ಸೋಲು ಇದಾಗಿದೆ.

ಭಾರತ: 46.3 ಓವರ್‌ಗಳಲ್ಲಿ 208 (ಲಕ್ಷ್ಯ 0, ಆರ್ಯವೀರ್ 22, ವಿನೀತ್ 8, ಯಶೋವರ್ಧನ್ 1, ಅರ್ಜುನ್ 107, ಅನ್ವಯ್ 10, ಮನಲ್ 11, ಯಶ್‌ವೀರ್ 4, ಕಾವ್ಯ 23, ಮೋಹಿತ್ 7, ರಿಜ್ವಾನ್‌ವುಲ್ಲಾ 24ಕ್ಕೆ 3, ಅಲಿ ರಾಜ 37ಕ್ಕೆ 3, ನಿಕಬ್ 42ಕ್ಕೆ 3). ಪಾಕ್: 48.1 ಓವರ್‌ಗಳಲ್ಲಿ 7 ವಿಕೆಟ್‌ಗೆ 209 (ಉಸ್ಮಾನ್ ಖಾನ್ 16, ಜಹಾಂಗಿರ್ 5, ಅಬ್ದುಲ್ 20, ಅಹ್ಮದ್ 8, ರ್ಹಾನ್ 2, ಹುಸ್‌ನೈನ್ 38, ಹಮ್ಜಾ ಜಹೂರ್ 100*, ಸಿಯಾಮ್ 4, ಮನಲ್ 32ಕ್ಕೆ 3, ಮೋಹಿತ್ 45ಕ್ಕೆ 2, ಇಶಾನ್ ಸೂದ್ 36ಕ್ಕೆ 1). ಪಂದ್ಯಶ್ರೇಷ್ಠ: ಹಮ್ಜಾ ಜಹೂರ್.

ಭಾರತಕ್ಕೆ ಮುಂದಿನ ಪಂದ್ಯ

ಯಾವಾಗ: ನ. 10, ಮಂಗಳವಾರ

ಎದುರಾಳಿ: ಯುಎಇ, ಆರಂಭ: ಬೆಳಗ್ಗೆ 10.30

ಅರ್ಜುನ್ ಏಕಾಂಗಿ ಹೋರಾಟ

ಕಳೆದ ಆವೃತ್ತಿಯ ಫೈನಲ್ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿ ಕಣಕ್ಕಿಳಿದ ಭಾರತ ಮೊದಲ ಓವರ್‌ನಲ್ಲಿ ನಾಯಕ ಲಕ್ಷ್ಯ ರಾಯ್‌ಚಂದಾನಿ ಡಕೌಟ್‌ನಿಂದ ಆಘಾತ ಎದುರಿಸಿತು. ನಂತರ ಆರ್ಯವೀರ್ ಜತೆಯಾದ ವಿನೀತ್ (8) ಎರಡನೇ ವಿಕೆಟ್‌ಗೆ 50 ಎಸೆತಗಳಲ್ಲಿ 21 ರನ್ ಸೇರಿಸಿದರು. 42 ರನ್‌ಗೆ 4 ವಿಕೆಟ್ ಕೈಚೆಲ್ಲಿದ ಭಾರತಕ್ಕೆ ಅರ್ಜುನ್-ಅನ್ವಯ್ ಜೋಡಿ ಆಸರೆ ಸಿಕ್ಕಿತು. ಇವರಿಬ್ಬರು ಐದನೇ ವಿಕೆಟ್‌ಗೆ 37 ಎಸೆತಗಳಲ್ಲಿ 44 ರನ್ ಕಲೆಹಾಕಿದರು, 23ನೇ ಓವರ್‌ನಲ್ಲಿ ಅನ್ವಯ್ ಔಟಾದರು. ನಂತರ ಅರ್ಜುನ್‌ಗೆ ಜತೆಯಾದ ಮನಲ್ (11) ಉತ್ತಮ ಬೆಂಬಲ ನೀಡಿದರು. ಈ ಜೋಡಿ ಆರನೇ ವಿಕೆಟ್‌ಗೆ 55 ಎಸೆತಗಳಲ್ಲಿ 64 ರನ್ ಸೇರಿಸಿ ಮೊತ್ತವನ್ನು 200ರ ಸನಿಹಕ್ಕೇರಿಸಿತು. 80 ಎಸೆತಗಳಲ್ಲಿ ಶತಕ ಪೂರೈಸಿದ ಅರ್ಜುನ್ ಜತೆಗೆ ಕಾವ್ಯ ಪರೇಶ್ ಪಟೇಲ್ (23) ಆಟದ ನೆರವಿನಿಂದ ಭಾರತ ಮೊತ್ತವನ್ನು 208ಕ್ಕೇರಿಸಿಕೊಂಡಿತು.

ವೈಭವ್ ಏಕೆ ಆಡುತ್ತಿಲ್ಲ?

ಐಪಿಎಲ್ ಸೆನ್ಸೇಶನ್ ವೈಭವ್ ಸೂರ್ಯವಂಶಿ ಈಗಾಗಲೇ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಿದ್ದರೂ, 15 ವರ್ಷದ ಬ್ಯಾಟರ್ 19 ವಯೋಮಿತಿ ಏಷ್ಯಾಕಪ್‌ನಲ್ಲಿ ಭಾರತ ಕಿರಿಯರ ತಂಡದ ಭಾಗವಾಗದಿರುವುದು ಪ್ರಶ್ನೆಯಾಗಿ ಉಳಿದಿದೆ.

ಬಿಸಿಸಿಐ 2016ರಲ್ಲಿ ಜಾರಿಗೊಳಿಸಿದ ನಿಯಮ ಪ್ರಕಾರ ಒಬ್ಬ ಆಟಗಾರ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಒಮ್ಮೆ ಮಾತ್ರ ಆಡುವ ಅವಕಾಶ ಹೊಂದಿರಲ್ಲಿದ್ದಾರೆ. ವರ್ಷಾರಂಭದಲ್ಲಿ 19 ವಯೋಮಿತಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ಕಿರಿಯರ ಐಸಿಸಿ ಟೂರ್ನಿಯಲ್ಲಿ ಆಡುವ ಅರ್ಹತೆ ಹೊಂದಿಲ್ಲ. ಇದರಿಂದಾಗಿ ಅವರನ್ನು ಕಿರಿಯರ ತಂಡದ ಆಯ್ಕೆಗೆ ಪರಿಗಣಿಸಿಲ್ಲ ಎನ್ನಲಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ಟಿ20 ತಂಡದೊಂದಿಗೆ ತೆರಳಿದ್ದ ವೈಭವ್ ತವರಿಗೆ ಮರಳಿದ್ದು, ನವೆಂಬರ್ 14ರಂದು ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಿಹಾರ ತಂಡವನ್ನು ಮುನ್ನಡೆಸಲಿದ್ದಾರೆ.