

ದುಬೈ: ನಾಯಕ ಬಾಬರ್ ಅಜಮ್ (51ರನ್, 47 ಎಸೆತ, 4 ಬೌಂಡರಿ) ಆಕರ್ಷಕ ಅರ್ಧಶತಕ ಹಾಗೂ ಆಸಿಫ್ ಅಲಿ (25*ರನ್, 7 ಎಸೆತ) ನಿರ್ಣಾಯಕ ಹಂತದಲ್ಲಿ ಸಿಡಿಸಿದ 4 ಸಿಕ್ಸರ್‌ಗಳ ನೆರವಿನಿಂದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿತು. ಈ ಮೂಲಕ ಎರಡನೇ ಗುಂಪಿನಿಂದ ಸೆಮಿಫೈನಲ್ ಹಂತವನ್ನು ಬಹುತೇಕ ಖಚಿತಪಡಿಸಿಕೊಂಡಿತು. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 5 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ತಂಡವನ್ನು ಸೋಲಿಸಿತು. ಒಂದು ಹಂತದಲ್ಲಿ ಅಫ್ಘಾನಿಸ್ತಾನ ತಂಡ ಪ್ರಬಲ ಪೈಪೋಟಿ ತೋರಿದರೂ ಪಾಕ್ ತಂಡ ಮೇಲುಗೈ ಸಾಧಿಸಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ, ಪಾಕಿಸ್ತಾನ ಬೌಲರ್‌ಗಳ ಕರಾರುವಾಕ್ ದಾಳಿ ನಡುವೆಯೂ ನಾಯಕ ಮೊಹಮದ್ ನಬಿ (35*ರನ್, 32 ಎಸೆತ, 5 ಬೌಂಡರಿ) ಹಾಗೂ ಗುಲ್ಬಾದಿನ್ ನೈಬ್ (35*ರನ್, 25 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ನಿರ್ವಹಣೆ ಫಲವಾಗಿ 6 ವಿಕೆಟ್‌ಗೆ 147 ರನ್‌ಗಳಿಸಿತು. ಬಳಿಕ ಪಾಕಿಸ್ತಾನ ತಂಡಕ್ಕೆ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 148 ರನ್‌ಗಳಿಸಿ ಜಯದ ನಗೆ ಬೀರಿತು.
* ಅಫ್ಘಾನಿಸ್ತಾನ ಗೆಲುವು ಕಿತ್ತ ಆಸಿಫ್
ಬಾಬರ್ ಅಜಮ್ ಅರ್ಧಶತಕದಾಟದ ನಡುವೆಯೂ ರಶೀದ್ ಖಾನ್ (24ಕ್ಕೆ 2) ಪಾಕಿಸ್ತಾನ ತಂಡಕ್ಕೆ ಆಘಾತ ನೀಡಲು ಯಶಸ್ವಿಯಾಗಿದ್ದರು. ಕಡೇ 2 ಓವರ್‌ಗಳಲ್ಲಿ ಪಾಕ್ ತಂಡದ ಗೆಲುವಿಗೆ 24 ರನ್‌ಗಳ ಅವಶ್ಯಕತೆ ಇತ್ತು. ಈ ವೇಳೆ ಕರೀಮ್ ಜನತ್ ಎಸೆದ 19ನೇ ಓವರ್‌ನಲ್ಲಿ 4 ಸಿಕ್ಸರ್ ಸಿಡಿಸುವ ಮೂಲಕ ಆಸಿಫ್ ಅಲಿ ಅಫ್ಘಾನಿಸ್ತಾನ ತಂಡದ ಕೈಯಲ್ಲಿದ್ದ ಗೆಲುವನ್ನು ಕಿತ್ತರು.
ಅಫ್ಘಾನಿಸ್ತಾನ: 6 ವಿಕೆಟ್‌ಗೆ 147 (ಮೊಹಮದ್ ನಬಿ 35*, ಗುಲ್ಬಾದಿನ್ ನೈಬ್ 35*,ಇಮಾದ್ ವಾಸೀಮ್ 25ಕ್ಕೆ 2), ಪಾಕಿಸ್ತಾನ: 19 ಓವರ್‌ಗಳಲ್ಲಿ 5 ವಿಕೆಟ್‌ಗೆ 148 (ಬಾಬರ್ ಅಜಮ್ 51, ಖರ್ ಜಮಾನ್ 30, ಆಸಿಫ್ ಅಲಿ 25*, ರಶೀದ್ ಖಾನ್ 26ಕ್ಕೆ 2)