

ಕರಾಚಿ: ನಾಯಕ ಬಾಬರ್ ಅಜಮ್ (102 ರನ್, 197 ಎಸೆತ, 12 ಬೌಂಡರಿ) ಕಳೆದ 2 ವರ್ಷಗಳಲ್ಲಿ ಸಿಡಿಸಿದ ಮೊದಲ ಶತಕದ ಬಲದಿಂದ ಪಾಕಿಸ್ತಾನ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಎಸೆದ ಕಠಿಣ ಸವಾಲಿಗೆ ದಿಟ್ಟ ಉತ್ತರ ನೀಡಿದೆ. ಇದರಿಂದ ಪಂದ್ಯದ ಅಂತಿಮ ದಿನದಾಟ ತೀವ್ರ ಕುತೂಹಲ ಕೆರಳಿಸಿದೆ. ಪಾಕ್ ಗೆಲುವಿಗೆ ಇನ್ನೂ 314 ರನ್ ಬೇಕಿದ್ದರೆ, ಆಸೀಸ್‌ಗೆ 8 ವಿಕೆಟ್ ಅಗತ್ಯವಿದೆ.
ನ್ಯಾಷನಲ್ ಸ್ಟೇಡಿಯಂನಲ್ಲಿ ಮಂಗಳವಾರ 1 ವಿಕೆಟ್‌ಗೆ 81 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಆಸೀಸ್, ಕೇವಲ 5.3 ಓವರ್ ಆಡಿ 2 ವಿಕೆಟ್‌ಗೆ 97 ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ 506 ರನ್ ಸವಾಲು ಪಡೆದ ಪಾಕ್, 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 192 ರನ್ ಪೇರಿಸಿದೆ. ಅಜಮ್ ಜತೆಗೆ ಆರಂಭಿಕ ಅಬ್ದುಲ್ ಶಫಿಕ್ (71*) ಕ್ರೀಸ್‌ನಲ್ಲಿದ್ದಾರೆ. ಪಾಕಿಸ್ತಾನ ಗೆದ್ದರೆ ವಿಶ್ವದಾಖಲೆ ನಿರ್ಮಾಣವಾಗಲಿದೆ. 145 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾವ ತಂಡವೂ 450ಕ್ಕಿಂತ ಅಧಿಕ ಮೊತ್ತ ಬೆನ್ನಟ್ಟಿ ಗೆದ್ದ ದೃಷ್ಟಾಂತವಿಲ್ಲ.
ಆಸ್ಟ್ರೇಲಿಯಾ: 556/9 ಡಿಕ್ಲೇರ್ ಮತ್ತು 2 ವಿಕೆಟ್‌ಗೆ 97 ಡಿಕ್ಲೇರ್ (ಖವಾಜ 44*, ಲಬುಶೇನ್ 44, ಶಹೀನ್ ಷಾ 21ಕ್ಕೆ 1), ಪಾಕಿಸ್ತಾನ: 148 ಮತ್ತು 2 ವಿಕೆಟ್‌ಗೆ 192 (ಶಫಿಕ್ 71*, ಇಮಾಮ್ 1, ಅಜರ್ ಅಲಿ 6, ಅಜಮ್ 102*, ಲ್ಯಾನ್ 50ಕ್ಕೆ 1, ಗ್ರೀನ್ 15ಕ್ಕೆ 1).