2026ರ ಐಪಿಎಲ್​ಗೆ ಪಾಕ್​ನ ಸ್ಟಾರ್​​ ಕ್ರಿಕೆಟಿಗ ಎಂಟ್ರಿ! RCB ಪರ ಆಡುವುದು ಬಹುತೇಕ ಫಿಕ್ಸ್!?​ | IPL 2026

ವಿಜಯವಾಣಿ - 2025-03-08T191956.184
Published on

Pakistan Cricketer: 2025ರ ಐಪಿಎಲ್​ 18ನೇ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, ಇದೇ ಮಾರ್ಚ್​ 22ರಿಂದ ಅದ್ಧೂರಿ ಚಾಲನೆ ಮೂಲಕ ಶುರುವಾಗಲಿದೆ, 10 ಬಲಿಷ್ಠ ತಂಡಗಳು ಟ್ರೋಫಿಗಾಗಿ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿವೆ. ತಮ್ಮ ನೆಚ್ಚಿನ ತಂಡ ಹಾಗೂ ಸ್ಟಾರ್​ ಆಟಗಾರರನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಮಧ್ಯೆ ಪಾಕಿಸ್ತಾನದ ಸ್ಟಾರ್​ ಕ್ರಿಕೆಟಿಗ 2026ರ ಐಪಿಎಲ್​ನಲ್ಲಿ (IPL 2026 )​ ಆಡುವ ಬಯಕೆ ಹೊರಹಾಕಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

2008ರಿಂದಲೂ ಪಾಕಿಸ್ತಾನಿ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುವುದನ್ನು ಬಿಸಿಸಿಐ ನಿಷೇಧಿಸಿದೆ. ಇಲ್ಲಿಯವರೆಗೂ ಯಾರನ್ನು ಯಾವ ತಂಡದಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡಿಲ್ಲ. ಆದರೆ, ಇದೀಗ ಪಾಕಿಸ್ತಾನದ ಸ್ಟಾರ್​ ಕ್ರಿಕೆಟಿಗ 2026ರ ಐಪಿಎಲ್​ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎಂಬ ಸುದ್ದಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಯಾರು ಆ ಆಟಗಾರ? ಏನಿದು ವಿಷಯ? ಎಂಬುದರ ಮಾಹಿತಿ ಹೀಗಿದೆ ಗಮನಿಸಿ.

ಮೊಹಮ್ಮದ್ ಅಮೀರ್

ತನ್ನ ವೇಗದ ಬೌಲಿಂಗ್​ಗೆ ಹೆಸರುವಾಸಿಯಾಗಿರುವ ಮೊಹಮ್ಮದ್ ಅಮೀರ್, ಶೀಘ್ರವೇ ಬ್ರಿಟಿಷ್ ಪ್ರಜೆಯಾಗಲಿದ್ದಾರೆ. ಅಲ್ಲಿನ ಪೌರತ್ವ ಪಡೆಯುವ ಹಿನ್ನೆಲೆ ತಮ್ಮ ಐಪಿಎಲ್​ ಆಡುವ ಕನಸನ್ನು ಈ ಮೂಲಕ ಈಡೇರಿಸಿಕೊಳ್ಳುವತ್ತ ಅಮೀರ್​ ಎದುರುನೋಡುತ್ತಿದ್ದಾರೆ. ಐಪಿಎಲ್ 2026ರ ಹರಾಜಿನಲ್ಲಿ ಭಾಗವಹಿಸುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಮೀರ್​, "ಮುಂದಿನ ವರ್ಷದ ಹೊತ್ತಿಗೆ, ನನಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗುತ್ತದೆ. ಇದೇನಾದರೂ ಸಂಭವಿಸಿದರೆ ಖಂಡಿತ ನಾನು ಐಪಿಎಲ್ ಆಡ್ತೀನಿ" ಎಂದಿದ್ದಾರೆ.

ಈ ಕಾರ್ಯಕ್ರಮದ ಭಾಗವಾಗಿದ್ದ ಅಹ್ಮದ್ ಶೆಹಜಾದ್, "ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಮೀರ್ ಉತ್ತಮ ಸೇರ್ಪಡೆ. ಇದು ಆರ್​ಸಿಬಿ ಫ್ರಾಂಚೈಸಿಗೆ ತಮ್ಮ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಹಾಯ ಮಾಡುತ್ತದೆ. ಆರ್‌ಸಿಬಿ ಬೌಲಿಂಗ್ ಸಮಸ್ಯೆಗಳನ್ನು ಸರಿಪಡಿಸಲು ಅಮೀರ್ ನಂತಹ ಬೌಲರ್ ಅಗತ್ಯವಿದೆ. ಬೌಲಿಂಗ್ ಜತೆಗೆ ಉತ್ತಮ ಬ್ಯಾಟಿಂಗ್ ಕೂಡ ಮಾಡುತ್ತಾರೆ. ನನ್ನ ಪ್ರಕಾರ, ಅಮೀರ್ ಆರ್‌ಸಿಬಿ ಪರ ಆಡಿದರೆ, ಟ್ರೋಫಿ ಗೆಲ್ಲಲು ತಂಡಕ್ಕೆ ಇನ್ನಷ್ಟು ಸುಲಭವಾಗಬಹುದು" ಎಂದು ಶೆಹಜಾದ್ ಅಭಿಪ್ರಾಯಿಸಿದ್ದಾರೆ.

"ವಿರಾಟ್ ನನಗೆ ತಮ್ಮ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರ ಆ್ಯಕ್ಷನ್‌, ಆಟದ ವೈಖರಿ ನೋಡಿ ನಾನು ಉತ್ಸುಕನಾಗಿದ್ದೆ. ಇಂದಿಗೂ ಅವರ ಬ್ಯಾಟಿಂಗ್‌ಗೆ ನಾನೊಬ್ಬ ದೊಡ್ಡ ಅಭಿಮಾನಿ. ಅವರು ಗಿಫ್ಟ್​ ಆಗಿ ಕೊಟ್ಟ ಬ್ಯಾಟ್​ನಿಂದಲೇ ಕೆಲವು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದೇನೆ" ಎಂದು ಅಮೀರ್​ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಪತ್ನಿ ಯುಕೆ ಪ್ರಜೆ

ಪ್ರಸ್ತುತ ಅಮೀರ್ ಅವರ ಪತ್ನಿ ನರ್ಜೀಸ್ ಯುಕೆ ಪ್ರಜೆಯಾಗಿದ್ದು, 36 ಟೆಸ್ಟ್, 61 ಏಕದಿನ ಮತ್ತು 62 ಟಿ20ಐ ಪಂದ್ಯಗಳನ್ನು ಆಡಿರುವ ಎಡಗೈ ವೇಗಿ ಅಮೀರ್​ಗೆ ಶೀಘ್ರವೇ ಯುನೈಟೆಡ್​ ಕಿಂಗ್​​ಡಮ್​ ದೇಶದ ಪಾಸ್‌ಪೋರ್ಟ್ ಸಿಗಲಿದೆ. ಇದೇ ಕಾರಣದಿಂದ ಅವರು ಐಪಿಎಲ್​ ಆಡುವ ಆಶಯವನ್ನು ಮುಕ್ತವಾಗಿ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net