

Pakistan: ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ರೌಂಡರ್ ಕಾರ್ಬಿನ್ ಬಾಷ್ ಅವರು ಐಪಿಎಲ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಹಿ ಹಾಕಿದ್ದೇ ತಡ ಇದೀಗ ಕಾರ್ಬಿನ್ರನ್ನು ಒಂದು ವರ್ಷದ ಮಟ್ಟಿಗೆ ಪಿಎಸ್ಎಲ್ನಿಂದ ಪಾಕಿಸ್ತಾನ ಬ್ಯಾನ್ ಮಾಡಿದೆ.
ಆರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕಾರ್ಬಿನ್ ಬಾಷ್ರನ್ನು ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿಯಾದ ಪೇಶಾವರ್ ಝಲ್ಮಿಗೆ ಆಯ್ಕೆ ಮಾಡಿಕೊಂಡಿತ್ತು. ಆದರೆ, ನಂತರದಲ್ಲಿ ಐಪಿಎಲ್ನ ಮುಂಬೈ ಇಂಡಿಯನ್ಸ್ ತಂಡವು, ದಕ್ಷಿಣ ಆಫ್ರಿಕಾದ ಲಿಜಾದ್ ವಿಲಿಯಮ್ಸ್ ಗಾಯಗೊಂಡ ಹಿನ್ನೆಲೆ ಅವರ ಬದಲಿಗೆ ಕಾರ್ಬಿನ್ರನ್ನು ತಂಡಕ್ಕೆ ಕರೆದುಕೊಂಡಿತು. ಈ ವಿಷಯ ತಿಳಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಸ್ಟಾರ್ ಆಲ್ರೌಂಡರ್ ವಿರುದ್ಧ ಕಿಡಿಕಾರಿದ್ದು, ಒಂದು ವರ್ಷ ತಮ್ಮ ಲೀಗ್ನಿಂದ ಹೊರಗಿಡುವುದಾಗಿ ಹೇಳಿದೆ.
ಈ ವರ್ಷ ಎರಡೂ ಟಿ20 ಲೀಗ್ಗಳು ಘರ್ಷಣೆಗೆ ಇಳಿದಿವೆ. ಅತ್ತ ಐಪಿಎಲ್ ಆರಂಭಗೊಂಡು ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಪ್ರೇಮಿಗಳ ಗಮನವನ್ನು ಸೆಳೆಯುತ್ತಿದ್ದರೆ, ಇತ್ತ ಇಂದಿನಿಂದ ಪಿಎಸ್ಎಲ್ ಶುರುವಾಗಲಿದೆ. ಆದರೆ, ಐಪಿಎಲ್ಗಿರುವ ದೊಡ್ಡ ಅಭಿಮಾನಿಗಳ ಬಳಗ ಪಿಎಸ್ಎಲ್ಗೆ ಇರದಿರುವುದೇ ಪಾಕಿಸ್ತಾನದ ಕೋಪಕ್ಕೆ ಕಾರಣ. ಐಪಿಎಲ್ಗೆ ಟಕ್ಕರ್ ಕೊಡಬೇಕು ಎಂಬ ನಿಟ್ಟಿನಲ್ಲಿ ಪಿಎಸ್ಎಲ್ಗೆ ಹೊಸ ಕಳೆ ತರಲು ನಾನಾ ಕಸರತ್ತು ನಡೆಸುತ್ತಿರುವ ಪಿಸಿಬಿ, ಬಾಷ್ ಐಪಿಎಲ್ಗೆ ಹೋದರು ಎಂಬ ಒಂದೇ ಒಂದು ಕಾರಣಕ್ಕೆ ಅವರನ್ನು ಒಂದು ವರ್ಷಗಳ ಕಾಲ ಲೀಗ್ನಿಂದ ನಿಷೇಧಿಸಿದೆ.