

ಕರಾಚಿ: ಚೀನಾದ ಹಾಂಗ್‌ರೆೌನಲ್ಲಿ ಸೆಪ್ಟೆಂಬರ್ 19 ರಿಂದ 26 ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್‌ನ ಕ್ರೀಡಾ ಗ್ರಾಮಕ್ಕೆ ಕ್ರೀಡಾಪಟುಗಳು ಮಕ್ಕಳೊಂದಿಗೆ ಆಗಮಿಸುವುದಕ್ಕೆ ನಿರ್ಬಂಧ ವಿಧಿಸಿರುವ ಸಂಘಟಕರ ನಿರ್ಧಾರದಿಂದಾಗಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮರೂಫ್ ಕ್ರೀಡಾಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಬಿಸ್ಮಾ, ಫಾತಿಮಾ ಎಂಬ 2 ವರ್ಷದ ಮಗಳನ್ನು ಹೊಂದಿದ್ದಾರೆ. ಕಳೆದ ವರ್ಷ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಗ್ರಾಮಕ್ಕೆ ಮಗಳೊಂದಿಗೆ ಪ್ರವೇಶಿಸಿದ್ದರು. ಬಿಸ್ಮಾ ಗೈರಿನಲ್ಲಿ ನಿದಾ ದರ್ ಏಷ್ಯಾಡ್‌ಗೆ ಪಾಕ್ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 2010ರಲ್ಲಿ ಚೀನಾ ಹಾಗೂ 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಕೂಟದಲ್ಲಿ ಚಿನ್ನ ಪದಕ ಜಯಿಸಿರುವ ಪಾಕಿಸ್ತಾನ ತಂಡ ಮೂರನೇ ಬಾರಿ ಚಿನ್ನ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸುವ ನಿರೀಕ್ಷೆಯಲ್ಲಿದೆ. ಆದರೆ ತಂಡದ ಪ್ರಮುಖ ಆಟಗಾರ್ತಿಯ ಗೈರು ಹಿನ್ನಡೆ ತಂದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟಿ20 ತಂಡಗಳ ರ‌್ಯಾಂಕಿಂಗ್ ಪ್ರಕಾರ ಪಾಕಿಸ್ತಾನ ತಂಡ ನೇರವಾಗಿ ಕ್ವಾರ್ಟರ್‌ೈನಲ್‌ನಲ್ಲಿ ಕಣಕ್ಕಿಳಿಯಲಿದೆ. ಸೆಪ್ಟೆಂಬರ್ 25 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಸೆ.26 ರಂದು ಫೈನಲ್ ಹಾಗೂ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಯಲಿದೆ.