

ಅಬುಧಾಬಿ: ಹ್ಯಾಟ್ರಿಕ್ ಗೆಲುವಿನಿಂದ ಎರಡನೇ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡ ದಿನದ ಮತ್ತೊಂದು ಪಂದ್ಯದಲ್ಲಿ ಕ್ರಿಕೆಟ್ ಶಿಶು ನಮೀಬಿಯ ತಂಡವನ್ನು ಎದುರಿಸಲಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಬಲಿಷ್ಠ ಭಾರತ, ನ್ಯೂಜಿಲೆಂಡ್ ತಂಡಗಳನ್ನು ಮಣಿಸಿದ ವಿಶ್ವಾಸದಲ್ಲಿರುವ ಪಾಕಿಸ್ತಾನ ತಂಡ 4ನೇ ಜಯದೊಂದಿಗೆ ಸೆಮೀಸ್ ಖಾತ್ರಿಪಡಿಸಿಕೊಳ್ಳುವ ಕನಸಿನಲ್ಲಿದೆ.
ನಾಯಕ ಬಾಬರ್ ಅಜಮ್ ಹಾಗೂ ಮೊಹಮದ್ ರಿಜ್ವಾನ್ ಆರಂಭಿಕ ಜೋಡಿಯೇ ಪಾಕ್ ತಂಡದ ದೊಡ್ಡ ಶಕ್ತಿಯಾಗಿದೆ. ಅಫ್ಘಾನಿಸ್ತಾನ ಎದುರು ಗೆಲುವಿಗಾಗಿ ಪರದಾಡಿದರೂ ಆಸಿಫ್ ಅಲಿ, ಒಂದೇ ಓವರ್‌ನಲ್ಲಿ 4 ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಪಾಕಿಸ್ತಾನ ತಂಡ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಶಾಕ್ ನೀಡಿದ್ದ ನಮೀಬಿಯ ಹಿಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಎದುರು ಸೋಲು ಕಂಡಿತ್ತು. ಇದೀಗ ಬಲಿಷ್ಠ ತಂಡದ ಸವಾಲಿಗೆ ಸನ್ನದ್ಧವಾಗಿದೆ.
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್