

ಜೊಹಾನ್ಸ್‌ಬರ್ಗ್: ಎಡಗೈ ವೇಗಿ ಅರ್ಷದೀಪ್ ಸಿಂಗ್ (37ಕ್ಕೆ 5) ಚೊಚ್ಚಲ ಐದು ವಿಕೆಟ್ ಗೊಂಚಲು ಹಾಗೂ ಆವೇಶ್ ಖಾನ್ (27ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಯುವ ಪಡೆ 3 ಪಂದ್ಯಗಳ ಸರಣಿಯಲ್ಲಿ ಶುಭಾರಂಭದೊಂದಿಗೆ 1-0 ಮುನ್ನಡೆ ಕಂಡಿದೆ.
ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ, ಅರ್ಷದೀಪ್-ಆವೇಶ್ ವೇಗದ ದಾಳಿಗೆ ತತ್ತರಿಸಿ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ಇದು ತವರಿನಲ್ಲಿ ಹರಿಣಗಳ ಕನಿಷ್ಠ ಮೊತ್ತವಾಗಿದೆ. ಪ್ರತಿಯಾಗಿ ಯುವ ಆರಂಭಿಕ ಸಾಯಿ ಸುದರ್ಶನ್ (55* ರನ್, 43 ಎಸೆತ, 9 ಬೌಂಡರಿ) ಹಾಗೂ ಉಪನಾಯಕ ಶ್ರೇಯಸ್ ಅಯ್ಯರ್ (52 ರನ್, 45 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಬಲದಿಂದ ಭಾರತ 16.4 ಓವರ್‌ಗಳಲ್ಲೇ 2 ವಿಕೆಟ್‌ಗೆ 117 ರನ್‌ಗಳಿಸಿ, ಇನ್ನೂ 200 ಎಸೆತ ಬಾಕಿಯಿರುವಂತೆಯೇ ಸುಲಭ ಜಯ ಸಾಧಿಸಿತು. ಒಟ್ಟಾರೆ 44.1 ಓವರ್‌ಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು.
4: ಸಾಯಿ ಸುದರ್ಶನ್ ಪದಾರ್ಪಣೆ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಭಾರತದ 17ನೇ ಆಟಗಾರ ಮತ್ತು 4ನೇ ಆರಂಭಿಕ ಎನಿಸಿದರು. ರಾಬಿನ್ ಉತ್ತಪ್ಪ, ಕೆಎಲ್ ರಾಹುಲ್, ೈಜ್ ಜಲ್ ಹಿಂದಿನ ಸಾಧಕರು.
1 : ಅರ್ಷದೀಪ್ ಸಿಂಗ್ ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯರ 5 ವಿಕೆಟ್ ಕಬಳಿಸಿದ ಮೊದಲ ಭಾರತೀಯ ವೇಗಿ ಹಾಗೂ ಒಟ್ಟಾರೆ 4ನೇ ಬೌಲರ್. ಸುನೀಲ್ ಜೋಶಿ (5ಕ್ಕೆ6), ಚಾಹಲ್ (22ಕ್ಕೆ5), ಜಡೇಜಾ (33ಕ್ಕೆ5) ಹಿಂದಿನ ಸಾಧಕರು.
*116: ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡ ಏಕದಿನದಲ್ಲಿ ದಾಖಲಿಸಿದ ಅತಿ ಕನಿಷ್ಠ ಮೊತ್ತ ಇದಾಗಿದೆ. 2018ರಲ್ಲಿ ಭಾರತ ವಿರುದ್ಧವೇ 118 ರನ್ ಗಳಿಸಿದ್ದು ಹಿಂದಿನ ಕನಿಷ್ಠ ಮೊತ್ತ.
*9: ದ.ಆಫ್ರಿಕಾ ಎದುರಿನ ಏಕದಿನ ಪಂದ್ಯವೊಂದರಲ್ಲಿ ಭಾರತೀಯ ವೇಗಿಗಳ ಗರಿಷ್ಠ ವಿಕೆಟ್ ಸಾಧನೆ ಇದಾಗಿದೆ.
400: ಸಾಯಿ ಸುದರ್ಶನ್ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಿದ 400ನೇ ಆಟಗಾರ ಎನಿಸಿದರು. ಏಕದಿನ ಕ್ರಿಕೆಟ್ ಆಡಿದ 253ನೇ ಭಾರತೀಯರೆನಿಸಿದರು.
3: ಏಕದಿನ ಕ್ರಿಕೆಟ್‌ನಲ್ಲಿ ಇದು ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ 3ನೇ ಕನಿಷ್ಠ ಮೊತ್ತವಾಗಿದೆ. ಕಳೆದ ವಿಶ್ವಕಪ್‌ನಲ್ಲಿ ಕೋಲ್ಕತದಲ್ಲಿ 83 ರನ್‌ಗೆ ಆಲೌಟ್ ಆಗಿದ್ದು ಕನಿಷ್ಠ.