ಕುತೂಹಲ ಮೂಡಿಸಿದ ಫ್ರಾಂಚೈಸಿ ಮಾಲೀಕರು-ಬಿಸಿಸಿಐ ಸಭೆ: ರಿಟೇನ್ ಆಟಗಾರರ ಸಂಖ್ಯೆ ನಿರ್ಧಾರ!

New-Project-3-3
Published on

ಮುಂಬೈ: ಮುಂದಿನ ವರ್ಷದ ಐಪಿಎಲ್ 18ನೇ ಆವೃತ್ತಿಗೆ ಮುನ್ನ ನಡೆಯಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಸಿಸಿಐ ಹಾಗೂ ಐಪಿಎಲ್ ಫ್ರಾಂಚೈಸಿ ಮಾಲೀಕರ ಸಭೆ ಮಾಸಾಂತ್ಯದಲ್ಲಿ ನಡೆಯುವ ಸಾಧ್ಯತೆಗಳಿವೆ. ಜುಲೈ 30 ಅಥವಾ 31ರಂದು ನಡೆಯುವ ಸಭೆಗೆ ಹಾಜರಾಗುವಂತೆ ಎಲ್ಲ 10 ಫ್ರಾಂಚೈಸಿಗಳ ಮಾಲೀಕರಿಗೆ ಬಿಸಿಸಿಐ ಸೂಚಿಸಿದೆ.

ಐಪಿಎಲ್ ತಂಡಗಳ ಮಾಲೀಕರ ಸಭೆಗಳು ಸಾಮಾನ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ ನಡೆಸಲಾಗುತಿತ್ತು. ಆದರೆ ಈ ಬಾರಿ ಮುಂಬೈನಲ್ಲಿ ಹೊಸದಾಗಿ ನವೀಕರಣಗೊಂಡಿರುವ ಬಿಸಿಸಿಐ ಕಚೇರಿಯಲ್ಲಿ ಸಭೆ ನಡೆಯುವ ನಿರೀಕ್ಷೆಯಿದೆ. ಆಟಗಾರರ ಹರಾಜಿಗೂ ಮುನ್ನ ಫ್ರಾಂಚೈಸಿಗಳು ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯ ನಿರ್ಧಾರ ಸಭೆಯ ಪ್ರಮುಖ ವಿಷಯವಾಗಿದೆ. ಆಟಗಾರರ ರಿಟೇನ್ ಸಂಖ್ಯೆಯ ಬಗ್ಗೆ ವಿವಿಧ ಫ್ರಾಂಚೈಸಿ ಮಾಲೀಕರು ವಿಭಿನ್ನ ನಿಲುವು ಹೊಂದಿದ್ದು, ಟೂರ್ನಿಯ ಆರಂಭದಿಂದಲೂ ತಂಡಗಳನ್ನು ಹೊಂದಿರುವ ಮಾಲೀಕರು ರಿಟೇನ್ ಆಟಗಾರರ ಸಂಖ್ಯೆ 8ಕ್ಕಿಂತ ಹೆಚ್ಚಿರಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ.

ಮುಂದಿನ 3 ವರ್ಷಕ್ಕೆ ತಂಡದ ಒಟ್ಟು ಬಜೆಟ್ ಮಿತಿ ಜತೆಗೆ ರಿಟೇನ್ ಮಾಡಿಕೊಳ್ಳುವ ಓರ್ವ ಆಟಗಾರನಿಗೆ ನೀಡಬಹುದಾದ ಗರಿಷ್ಠ ಮೊತ್ತದ ವೇತನದ ಬಗ್ಗೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ. ಈ ಬಾರಿ ರಿಟೇನ್ ಆಟಗಾರರ ಮೊತ್ತದ ಮಿತಿ ₹20 ಕೋಟಿಗೆ ಏರಿಕೆಯಾಗುವುದರ ಜತೆಗೆ ತಂಡದ ಬಜೆಟ್ ಮಿತಿ ₹120 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net