

ನವದೆಹಲಿ: ನಮ್ಮ ಹೋರಾಟ ಏನಿದ್ದರು WFIನ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧವೇ ಹೊರತು ಸರ್ಕಾರದ ವಿರುದ್ಧ ಅಲ್ಲ ಎಂದು ಕುಸ್ತಿಪಟುಗಳು ಹೇಳಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಒಂದನ್ನು ಬಿಡುಗಡೆ ಮಾಡಿರುವ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಸತ್ಯವರ್ತ್ ಕಡಿಯನ್ ಫೆಡರೇಷನ್ನಲ್ಲಿ ಹೆಚ್ಚಿನವರಿಗೆ ಮಹಿಳೆಯರ ಮೇಲಾಗುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ತಿಳಿದಿತ್ತು. ಆದರೆ, ಒಗ್ಗಟ್ಟಿಲ್ಲದ ಕಾರಣ ಯಾರು ಮುಂದೆ ಬಂದು ಹೇಳಿರಲಿಲ್ಲ.
ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಎಂದು ಹಲವರು ಬಿಂಬಿಸಿದರು. ನಿಮ್ಮ ಪ್ರತಿಭಟನೆ ಸರ್ಕಾರದ ಮೇಲೆ ಯಾವುದೇ ತರಹದ ಪ್ರಭಾವವನ್ನು ಬೀರುವುದಿಲ್ಲ ಎಂದೆಲ್ಲಾ ಹೇಳಿದ್ದರು. ಆಗ ನಮ್ಮ ಜೊತೆ ಜಮ್ಮು-ಕಾಶ್ಮಿರದ ಮಾಜಿ ಲೆಫ್ಟಿನೆಂಟ್ ಗವರ್ನರ್ ಸತ್ಯಪಾಲ್ ಮಲಿಕ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳ ನಾಯಕರು, ಸಂಘ-ಸಂಸ್ಥೆಗಳ ಮುಖಂಡರು ಕೈ ಜೋಡಿಸಿದರು.
ನಾವು ಮೊದಲಿಗೆ ಜನವರಿಯಲ್ಲಿ ಹೋರಾಟ ಆರಂಭಿಸಿದಾಗ ಬಿಜೆಪಿ ನಾಯಕರಾದ ತೀರತ್ ರಾಣಾ ಹಾಗೂ ಬಬಿತಾ ಪೋಗಟ್ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಇದು ಹೇಗೆ ರಾಜಕೀಯ ಪ್ರೇರಿತವಾಗುತ್ತದೆ ಎಂದು ಕುಸ್ತಿಪಟುಗಳು ಪ್ರಶ್ನಿಸಿದ್ದಾರೆ.
ಮೊದಲಿಗೆ ನಮ್ಮಲ್ಲಿ ಒಗ್ಗಟ್ಟಿರಲಿಲ್ಲ, ಎರಡನೇಯದಾಗಿ ಅಪ್ರಾಪ್ತ ವಯಸ್ಕ ಬಾಲಕಿಯರ ಕುಟುಂಬದವರ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಇದರಿಂದ ಆಕೆ ಎರಡು ಬಾರಿ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಳು. ಕುಸ್ತಿಗೆ ಬರುವವರು ಅತ್ಯಂತ ಬಡ ಹಿನ್ನಲೆಯಿಂದ ಬರುವವರಾಗಿದ್ದು, ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎದುರು ತಮ್ಮ ಮೇಲಾದ ದೌರ್ಜನ್ಯವನ್ನು ಜೋರಾಗಿ ಹೇಳಿಕೊಳ್ಳದೆ ಸುಮ್ಮನಾಗಿಬಿಡುತ್ತಾರೆ ಎಂದು ವಿಡಿಯೋದಲ್ಲಿ ಹೇಳಿದ್ಧಾರೆ.