ಆಸ್ಟ್ರೇಲಿಯನ್​ ಓಪನ್​ನಲ್ಲಿ ಕೋಕೋ ಗೌಫ್​, ಮೆಡ್ವೆಡೇವ್​ ಗೆಲುವಿನ ಆರಂಭ; ಒಸಾಕಾ, ಮರ್ರೆಗೆ ಆಘಾತ

aus tennis web
Published on

ಮೆಲ್ಬೋರ್ನ್​: ಸತತ 2ನೇ ಗ್ರಾಂಡ್​ ಸ್ಲಾಂ ಗೆಲ್ಲುವ ಹಂಬಲದಲ್ಲಿರುವ ಅಮೆರಿಕದ 19 ವರ್ಷದ ಆಟಗಾರ್ತಿ ಕೋಕೋ ಗೌಫ್​, 3ನೇ ಶ್ರೇಯಾಂಕಿತ ರಷ್ಯಾದ ತಾರೆ ಡೇನಿಯಲ್​ ಮೆಡ್ವೆಡೇವ್​, ಹಾಲಿ ರನ್ನರ್​ಅಪ್​ ಗ್ರೀಸ್​ನ ಸ್ಟೆಫಾನೋಸ್​ ಸಿಸಿಪಾಸ್​ ಆಸ್ಟ್ರೆಲಿಯನ್​ ಓಪನ್​ನಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ. ತಾಯ್ತನದ ಬಿಡುವಿನ ಬಳಿಕ ಮರಳಿದ ಜಪಾನ್​ ತಾರೆ ನವೊಮಿ ಒಸಾಕಾ, ವಿಂಬಲ್ಡನ್​ ಚಾಂಪಿಯನ್​ ಮರ್ಕೆಟಾ ವೊಂಡ್ರೊಸೋವಾ ಮತ್ತು ಐದು ಬಾರಿಯ ಫೈನಲಿಸ್ಟ್​ ಆಂಡಿ ಮರ್ರೆ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಅನುಭವಿಸಿದ್ದಾರೆ.

4ನೇ ಶ್ರೇಯಾಂಕಿತೆ ಕೋಕೋ ಗೌಫ್​ ಮೊದಲ ಸುತ್ತಿನಲ್ಲಿ ಸ್ಲೊವೇನಿಯಾದ ಆನ್ನಾ ಕ್ಯಾರೊಲಿನಾ ಸ್ಕಿಮಿಡ್ಲೋವಾ ವಿರುದ್ಧ 6-3, 6-0 ನೇರಸೆಟ್​ಗಳಿಂದ ಭರ್ತಿ ಒಂದು ಗಂಟೆಯ ಹೋರಾಟದಲ್ಲಿ ಗೆದ್ದರು. 7ನೇ ಶ್ರೇಯಾಂಕಿತೆ ಜೆಕ್​ ಗಣರಾಜ್ಯದ ಮರ್ಕೆಟಾ ವೊಂಡ್ರೊಸೋವಾ 1-6, 2-6ರಿಂದ ಡಯಾನ ಯಸ್ಟ್ರೆಮ್​ಸ್ಕಾ ವಿರುದ್ಧ ಆಘಾತ ಎದುರಿಸಿದರು. 6ನೇ ಶ್ರೇಯಾಂಕಿತೆ ಓನ್ಸ್​ ಜಬೇರ್​ 6-3, 6-1 ನೇರಸೆಟ್​ಗಳಿಂದ ಯೂಕ್ರೇನ್​ನ ಯುಲಿಯಾ ಸ್ಟಾರೊಡುಬ್​ಸೇವಾ ವಿರುದ್ಧ ಸುಲಭ ಜಯ ಸಾಧಿಸಿ ಶುಭಾರಂಭ ಕಂಡರು.

2021 ಮತ್ತು 2022ರ ಫೈನಲಿಸ್ಟ್​ ಮೆಡ್ವೆಡೇವ್​ ಪುರುಷರ ಸಿಂಗಲ್ಸ್​ನಲ್ಲಿ ಸುಲಭ ಮುನ್ನಡೆ ಕಂಡರು. ಮೆಡ್ವೆಡೇವ್​ 7-5, 6-2, 6-4, 1&0ಯಿಂದ ಮುಂದಿದ್ದಾಗ ಎದುರಾಳಿ ಫ್ರಾನ್ಸ್​ನ ಟೆರೆನ್ಸ್​ ಆಟ್ಮನ್​ ಗಾಯದಿಂದಾಗಿ ನಿವೃತ್ತಿ ಹೊಂದಿದರು. ಅರ್ಹತಾ ಸುತ್ತಿನಿಂದ ಮೇಲೇರಿದ್ದ 22 ವರ್ಷದ ಆಟ್ಮನ್​ ಮೆಲ್ಬೋರ್ನ್​ ಬಿಸಿಲಿನ ತಾಪದ ನಡುವೆ ಸ್ನಾಯುಸೆಳೆತದಿಂದ ಬಳಲಿದರು. 7ನೇ ಶ್ರೇಯಾಂಕಿತ ಸಿಸಿಪಾಸ್​ 5-7, 6-1, 6-1, 6-3ರಿಂದ ಬೆಲ್ಜಿಯಂನ ಜಿಜೌ ಬೆರ್ಗ್ಸ್​ ವಿರುದ್ಧ 2 ಗಂಟೆ, 59 ನಿಮಿಷಗಳ ಕಾದಾಟದಲ್ಲಿ ಗೆಲುವು ಸಾಧಿಸಿದರು.

ಒಸಾಕಾಗೆ ಶಾಕ್​

ಒಂದು ವರ್ಷದ ತಾಯ್ತನದ ಬಿಡುವಿನ ಬಳಿಕ ಮರಳಿ ಕಣಕ್ಕಿಳಿದ 26 ವರ್ಷದ ಒಸಾಕಾ, ಫ್ರಾನ್ಸ್​ ತಾರೆ ಕ್ಯಾರೊಲಿನ್​ ಗಾರ್ಸಿಯಾ ಎದುರು 4-6, 6-7ರಿಂದ ಪರಾಭವಗೊಂಡರು. 4 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳ ಒಡತಿ ಒಸಾಕಾ, 2022ರ ಯುಎಸ್​ ಓಪನ್​ ಬಳಿಕ ಯಾವುದೇ ಗ್ರಾಂಡ್​ ಸ್ಲಾಂ ಆಡಿರಲಿಲ್ಲ ಮತ್ತು 6 ತಿಂಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮನಿಡಿದ್ದರು. ಮಾಜಿ ವಿಶ್ವ ನಂ. 1 ಒಸಾಕಾ ಸದ್ಯ ವಿಶ್ವ ರ್ಯಾಂಕಿಂಗ್​ನಲ್ಲಿ 833ನೇ ಸ್ಥಾನಕ್ಕೆ ಕುಸಿದಿದ್ದು, ಅದಕ್ಕೆ ತಕ್ಕಂತೆ ಅವರ ಆಟದಲ್ಲೂ ಹಿಂದಿನ ಲಯ ಕಾಣಿಸಲಿಲ್ಲ.

ಮರ್ರೆ ಮೊದಲ ಸುತ್ತಿನಲ್ಲೇ ಮನೆಗೆ!

ಬ್ರಿಟನ್​ ತಾರೆ ಆಂಡಿ ಮರ್ರೆ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. 36 ವರ್ಷದ ಮರ್ರೆ ಅರ್ಜೆಂಟೀನಾದ ಥಾಮಸ್​ ಮಾರ್ಟಿನ್​ ಎಚೆವೆರ್ರಿ ವಿರುದ್ಧ 4-6, 2-6, 2-6 ನೇರಸೆಟ್​ಗಳಿಂದ ಪರಾಭವಗೊಂಡರು. ಇದರಿಂದ 3ನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್​ ನೊವಾಕ್​ ಜೋಕೊವಿಕ್​ರನ್ನು ಎದುರಿಸುವ ಅವಕಾಶವನ್ನೂ ಮರ್ರೆ ತಪ್ಪಿಸಿಕೊಂಡರು. 3 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳ ಒಡೆಯ ಮರ್ರೆ ಮೆಲ್ಬೋರ್ನ್​ನಲ್ಲಿ 5 ಬಾರಿ (2010, 11, 13, 15, 16) ಫೈನಲ್​ಗೇರಿದ್ದರೂ, ಒಮ್ಮೆಯೂ ಪ್ರಶಸ್ತಿ ಎತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net