ಒಲಿಂಪಿಕ್ ರಿಂಗ್‌ಗಳು 2 ಕೋಟಿ ರೂಪಾಯಿಗೆ ಮಾರಾಟ!

rings
Published on

ಪ್ಯಾರಿಸ್: ಹಾಲಿ ವರ್ಷ ಟೋಕಿಯೊದಲ್ಲಿ ನಿಗದಿಯಾಗಿದ್ದ ಒಲಿಂಪಿಕ್ಸ್, ಕರೊನಾ ಭೀತಿಯಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಇದರ ನಡುವೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಪ್ರತಿಬಿಂಬಿಸುವ ಪ್ರಧಾನ ಲಾಂಛನವಾಗಿರುವ 5 ರಿಂಗ್‌ಗಳನ್ನು 2 ಕೋಟಿ ರೂಪಾಯಿಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಲಾಗಿದೆ! ಹಾಗಾದರೆ ಒಲಿಂಪಿಕ್ಸ್‌ನಲ್ಲಿ ಇನ್ನು 5 ರಿಂಗ್‌ಗಳು ಇರುವುದಿಲ್ಲವೇ ಎಂದು ಹೌಹಾರಬೇಡಿ. ಒಲಿಂಪಿಕ್ಸ್ ಪಿತಾಮಹಾ ಪಿರ‌್ರೆ ಡಿ ಕೌಬೆರ್ಟಿನ್ ರಚಿಸಿದ್ದ 5 ರಿಂಗ್‌ಗಳ ಮೂಲಚಿತ್ರವನ್ನಷ್ಟೇ ಮಾರಾಟ ಮಾಡಲಾಗಿದೆ. ಅದಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಮೌಲ್ಯ ಲಭಿಸಿರುವುದು ಒಲಿಂಪಿಕ್ಸ್‌ನ ಮಹತ್ವವನ್ನು ಸಾರುತ್ತಿದೆ.

ಆಧುನಿಕ ಒಲಿಂಪಿಕ್ಸ್ ಪಿತಾಮಹಾ ಪಿರ‌್ರೆ ಡಿ ಕೌಬೆರ್ಟಿನ್ 2013ರಲ್ಲಿ ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣದ ರಿಂಗ್‌ಗಳನ್ನು ಒಂದರೊಳಗೆ ಒಂದು ಇಂಟರ್‌ಲಾಕ್ ಆದಂತೆ ರಚಿಸಿದ್ದರು. ಈ ಮೂಲಕ ವಿಶ್ವದ 5 ಪ್ರಮುಖ ಖಂಡಗಳನ್ನು ಪ್ರತಿಬಿಂಬಿಸಿದ್ದರು. ವಿವಿಧತೆಯಲ್ಲಿ ಏಕತೆಯನ್ನೂ ಇವು ಸಾರುತ್ತವೆ. 1920ರ ಒಲಿಂಪಿಕ್ಸ್‌ನಿಂದ ಈ ರಿಂಗ್‌ಗಳು ಒಲಿಂಪಿಕ್ಸ್‌ನ ಅಧಿಕೃತ ಲಾಂಛನವಾಗಿ ಬಳಸಲ್ಪಡುತ್ತಿವೆ.

ಈ ಒಲಿಂಪಿಕ್ಸ್ ರಿಂಗ್‌ಗಳ ಮೂಲ ಚಿತ್ರವನ್ನು ಕ್ಯಾನೆಸ್‌ನಲ್ಲಿ ಹರಾಜಿಗೆ ಇಡಲಾಗಿತ್ತು. ಇದನ್ನು ಬ್ರೆಜಿಲ್‌ನ ಕಲೆಕ್ಟರ್ ಒಬ್ಬರು 1.62 ಕೋಟಿ ರೂಪಾಯಿ (1.85 ಲಕ್ಷ ಯುರೋ) ಮತ್ತು ಶೇ. 27ರಷ್ಟು ತೆರಿಗೆ ಅಂದರೆ ಒಟ್ಟಾರೆ 2.06 ಕೋಟಿ ರೂಪಾಯಿಗೆ (2.34 ಲಕ್ಷ ಯುರೋ) ಪಡೆದುಕೊಂಡಿದ್ದಾರೆ ಎಂದು ಕ್ಯಾನೆಸ್ ಎನ್‌ಚೆರ್ಸ್‌ ನಿರ್ದೇಶಕ ಅಲೆಕ್ಸಾಂಡರ್ ಡೆಬುಸಿ ತಿಳಿಸಿದ್ದಾರೆ. ಕೌಬೆರ್ಟಿನ್ 1892ರಲ್ಲಿ ಬರೆದಿದ್ದ ಒಲಿಂಪಿಕ್ಸ್ ಪ್ರಣಾಳಿಕೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ 59 ಕೋಟಿ ರೂ.ಗೆ ಮಾರಾಟವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net