ಫಿಲ್ ಸಾಲ್ಟ್ - ಕೊಹ್ಲಿ ಬ್ಯಾಟಿಂಗ್ ಬಲ: ತವರಿನಾಚೆ ಆರ್‌ಸಿಬಿ ಗೆಲುವಿನ ಓಟ, ಹಲವು ದಾಖಲೆ ಬರೆದ ವಿರಾಟ್!

New Project (6)
Published on

ಜೈಪುರ: ಆರಂಭಿಕ ಫಿಲ್ ಸಾಲ್ಟ್ (65 ರನ್, 33 ಎಸೆತ, 5 ಬೌಂಡರಿ, 6 ಸಿಕ್ಸರ್) ಒದಗಿಸಿದ ಬಿರುಸಿನ ಆರಂಭ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (62* ರನ್, 45 ಎಸೆತ, 4 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಎದುರು 9 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ತವರಿನಾಚೆ ಆಡಿದ 4 ಪಂದ್ಯಗಳಲ್ಲೂ ಗೆದ್ದು ಅಜೇಯ ಓಟ ಮುಂದುವರಿಸಿದ ರಜತ್ ಪಾಟೀದಾರ್ ಪಡೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಮರಳಿದೆ. ಪರಿಸರ ಜಾಗೃತಿಯ ಉದ್ದೇಶದೊಂದಿಗೆ ಹಸಿರು ಜೆರ್ಸಿಯಲ್ಲಿ ಆಡಿದ ಆರ್‌ಸಿಬಿ ಈಗ ತವರಿನಲ್ಲಿ ಮಾತ್ರ ಗೆಲುವು ಕಾಣದ ಕೊರತೆ ಎದುರಿಸುತ್ತಿದೆ.

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆತಿಥೇಯ ರಾಜಸ್ಥಾನ, ಆರ್‌ಸಿಬಿ ಬೌಲರ್‌ಗಳ ಬಿಗಿ ದಾಳಿಯ ನಡುವೆಯೂ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (75 ರನ್, 47 ಎಸೆತ, 10 ಬೌಂಡರಿ, 2 ಸಿಕ್ಸರ್) ಬಿರುಸಿನಾಟ ಹಾಗೂ ಧ್ರುವ ಜುರೆಲ್ (35* ರನ್, 23 ಎಸೆತ, 2 ಬೌಂಡರಿ, 2 ಸಿಕ್ಸರ್) ಉಪಯಕ್ತ ಆಟದಿಂದ 4 ವಿಕೆಟ್‌ಗೆ 173 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಜತೆಯಾಟದ ನೆರವಿನಿಂದ ಆರ್‌ಸಿಬಿ 17.3 ಓವರ್‌ಗಳಲ್ಲಿ 2 ವಿಕೆಟ್‌ಗೆ 175 ರನ್‌ಗಳಿಸಿ, ಇನ್ನೂ 15 ಎಸೆತ ಇರುವಂತೆಯೇ ಗೆಲುವಿನ ಹಳಿಗೆ ಮರಳಿತು.

1. ಫಿಲ್ ಸಾಲ್ಟ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮೊದಲ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

2. ದೇವದತ್ ಪಡಿಕ್ಕಲ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಸಾವಿರ ರನ್‌ಗಳಿಸಿದ 2ನೇ ಭಾರತೀಯ ಬ್ಯಾಟರ್ ಎನಿಸಿದರು. ವಿರಾಟ್ ಕೊಹ್ಲಿ (8,252) ಮೊದಲಿಗ.

66. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಗರಿಷ್ಠ ಬಾರಿ 50 ಪ್ಲಸ್ ರನ್ ಸಿಡಿಸಿದ ಡೇವಿಡ್ ವಾರ್ನರ್ (66) ದಾಖಲೆ ಸರಿಗಟ್ಟಿದರು. ಕೊಹ್ಲಿ 250 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ವಾರ್ನರ್ 184 ಇನಿಂಗ್ಸ್‌ಗಳಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದರು.

*100. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದ 2ನೇ ಬ್ಯಾಟರ್ ಎನಿಸಿದರು. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (108) ಮೊದಲ ಸಾಧಕರಾಗಿದ್ದಾರೆ.

*5. ಆರ್‌ಸಿಬಿ ತಂಡ ಹಸಿರು ಜೆರ್ಸಿಯಲ್ಲಿ ಇದುವರೆಗೆ 14 ಪಂದ್ಯಗಳನ್ನಾಡಿದ್ದು, ಇದು 5ನೇ ಗೆಲುವಾಗಿದೆ. ಉಳಿದ 9ರಲ್ಲಿ ಸೋಲು ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net