ಸಂಜು ಸ್ಯಾಮ್ಸನ್​ ಸಿಕ್ಸರ್​ ನೋಡಿಯಾದ್ರೂ ನಿಮ್ಮ ಕಣ್ಣುಗಳನ್ನು ತೆರೆಯಿರಿ! Sanju Samson

Sanju Samson
Published on

Sanju Samson : ಬುಧವಾರ (ಜ.22) ರಾತ್ರಿ ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅವರ ಆರು ಓವರ್‌ಗಳ ಪ್ರದರ್ಶನವು ಭಾರತೀಯ ತಂಡದ ಆಯ್ಕೆದಾರರನ್ನು ಚಿಂತಿಸುವಂತೆ ಮಾಡಿದೆ. ಅವರ ಅದ್ಭುತ ಫಾರ್ಮ್ ಮತ್ತು 2024ರಲ್ಲಿ ದಾಖಲೆಯ ಮೂರು ಟಿ20 ಶತಕಗಳ ಹೊರತಾಗಿಯೂ, ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಗಿಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಲ್ಕು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸೇರಿದಂತೆ 26 ರನ್‌ಗಳನ್ನು ಬಾರಿಸಿದರು. ಇದರಲ್ಲಿ 22 ರನ್‌ಗಳು ವೇಗಿ ಗಸ್ ಅಟ್ಕಿನ್ಸನ್ ಅವರ ಮೊದಲ ಓವರ್‌ನಲ್ಲಿ ಬಂದವು. ಸಂಜು ಇದೇ ಫಾರ್ಮ್‌ನಲ್ಲಿ ಮುಂದುವರಿದರೆ, ಆಯ್ಕೆದಾರರು ಇನ್ನೂ ಹಲವು ವರ್ಷಗಳ ಕಾಲ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ.

ಕೋಚ್​​ ಗೌತಮ್ ಗಂಭೀರ್ ಅವರು ಸಂಜು ಸ್ಯಾಮ್ಸನ್​ ಅವರನ್ನು ಮೊದಲ ಕೀಪರ್ ಆಗಿ ತಂಡಕ್ಕೆ ಸೇರಿಸಿಕೊಳ್ಳುವಂತೆ ಆಯ್ಕೆ ಸಮಿತಿಯನ್ನು ವಿನಂತಿಸಿದ್ದರು. ಆದಾಗ್ಯೂ, ನಾಯಕ ರೋಹಿತ್ ಮತ್ತು ಮುಖ್ಯ ಆಯ್ಕೆದಾರ ಅಗರ್ಕರ್ ಅವರು ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದರು. ಸುನಿಲ್ ಗವಾಸ್ಕರ್ ಸೇರಿದಂತೆ ಇತರೆ ಮಾಜಿ ಕ್ರಿಕೆಟಿಗರು ಸಂಜು ಅವರನ್ನು ಕೈಬಿಟ್ಟಿದ್ದಕ್ಕೆ ಟೀಕಿಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಸಂಜು ಅವರಿಗೆ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಅವಕಾಶ ನೀಡಲಾಯಿತು. ಆ ದಿನ ಅವರು ಶತಕ (108) ಗಳಿಸಿದರು ಮತ್ತು ಅವರನ್ನು ಪಂದ್ಯಶ್ರೇಷ್ಠ ಎಂದು ಹೆಸರಿಸಲಾಯಿತು.

ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಮೀಸಲು ಆಟಗಾರರನ್ನು ಇನ್ನು ಘೋಷಣೆ ಮಾಡಿಲ್ಲ. ಪ್ರಸ್ತುತ 15 ಸದಸ್ಯರ ತಂಡದಲ್ಲಿ, ಯಾರಾದರೂ ಗಾಯಗೊಂಡರೆ ಬದಲಿಯಾಗಿ ಸಂಜು ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಲವಾದ ಅವಶ್ಯಕತೆಯಿದೆ. ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಫೆಬ್ರವರಿ 13 ರವರೆಗೆ ಸಮಯವಿದೆ. ಸಂಜು ಸ್ಯಾಮ್ಸನ್​, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡದ ಕಾರಣ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಗಿಡಲಾಗಿದೆ. ಅನಿವಾರ್ಯ ಕಾರಣಗಳಿಂದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಇಮೇಲ್ ಮೂಲಕ ಸಂಜು ತಿಳಿಸಿದ್ದರಿಂದ ಕೇರಳ ಕ್ರಿಕೆಟ್ ಅಸೋಸಿಯೇಷನ್ , ​ಸಂಜು ಅವರನ್ನು ತಂಡದಿಂದ ಕೈಬಿಟ್ಟಿತು. ಇದು ವಿವಾದ ಕೂಡ ಆಯಿತು. ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡದ ಕಾರಣ ಸಂಜು ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಗಿಡಲಾಗಿದೆ ಎಂಬ ವಾದವಿದೆ.

ಈ ಪ್ರದರ್ಶನ ನಿಮಗೆ ಕಾಣುತ್ತಿಲ್ಲವೇ?

2024 ರಲ್ಲಿ ಸಂಜು ಸ್ಯಾಮ್ಸನ್​ ಭಾರತದ ಪರ 13 ಟಿ20 ಪಂದ್ಯಗಳಲ್ಲಿ 180.16 ಸ್ಟ್ರೈಕ್ ರೇಟ್‌ನಲ್ಲಿ 436 ರನ್ ಗಳಿಸಿದರು. ಇದರಲ್ಲಿ 3 ಶತಕಗಳು ಮತ್ತು ಒಂದು ಅರ್ಧಶತಕ ಸೇರಿದೆ. ಕಳೆದ ವರ್ಷ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (31) ಬಾರಿಸಿದ ಆಟಗಾರ ಸಂಜು. ಐಸಿಸಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸಂಜು ಪ್ರಸ್ತುತ 17 ನೇ ಸ್ಥಾನದಲ್ಲಿದ್ದಾರೆ. ಸಂಜು ಅವರಂತಹ ಆಟಗಾರನನ್ನು ರಕ್ಷಿಸಲು ಕೇರಳ ಕ್ರಿಕೆಟ್ ಸಂಸ್ಥೆ ಸದಾ ಮುಂದಿರಬೇಕು. ಆದರೆ, ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಮಾಜಿ ಕ್ರಿಕೆಟಿಗ ಶ್ರೀಶಾಂತ್ ಟೀಕಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net