ಮೆಗಾ ಹರಾಜಿಗೆ ಮುನ್ನ ಐಪಿಎಲ್​ ತಂಡಗಳಿಂದ ಕೇವಲ 3 ಆಟಗಾರರ ರಿಟೇನ್​ಗೆ ಅವಕಾಶ?

web ipl retention
Published on

ನವದೆಹಲಿ: ಮುಂಬರುವ 2025ರ ಸಾಲಿನ ಐಪಿಎಲ್​ 18ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದಕ್ಕೆ ಮುನ್ನ ಎಲ್ಲ 10 ತಂಡಗಳಿಗೆ ಗರಿಷ್ಠ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಲಿದೆ ಎಂದು ವರದಿಯಾಗಿದೆ. ಜತೆಗೆ ಹರಾಜಿನಲ್ಲಿ ಒಂದು ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

ಕೆಲ ತಂಡಗಳು 6-8 ಆಟಗಾರರನ್ನೂ ರಿಟೇನ್​ ಮಾಡಿಕೊಳ್ಳಲು ಒಲವು ಹೊಂದಿವೆ. ಆದರೆ ಇತರ ಕೆಲ ತಂಡಗಳು ಇದನ್ನು ವಿರೋಧಿಸಿವೆ. ಐಪಿಎಲ್​ನಲ್ಲಿ ಹರಾಜು ಪ್ರಕ್ರಿಯೆ ಪ್ರಮುಖ ಭಾಗವಾಗಿದ್ದು, ಹೆಚ್ಚಿನ ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದರೆ ಇದು ನಿರುಪಯುಕ್ತ ಎನಿಸಲಿದೆ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಆರ್​ಟಿಎಂ ಅನ್ವಯ ಫ್ರಾಂಚೈಸಿ, ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೂ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ವಾದಿಸಲಾಗಿದೆ. ಹೀಗಾಗಿ ಬಿಸಿಸಿಐ 3+1 ಸೂತ್ರಕ್ಕೆ ಅಂಟಿಕೊಳ್ಳುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಸಚಿನ್​ ತೆಂಡುಲ್ಕರ್​, ಜಸ್​ಪ್ರೀತ್​ ಬುಮ್ರಾ ಮತ್ತು ಲಸಿತ್​ ಮಾಲಿಂಗರಂಥ (ಮುಂಬೈ) ಪ್ರಮುಖ ಆಟಗಾರರು ಮಾತ್ರ ಒಂದೇ ತಂಡದ ಪರ ಆಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net