

ಬೆಂಗಳೂರು: ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಇಂದಿಗೆ (ಆಗಸ್ಟ್ 25) ಒಂದು ವರ್ಷ ಪೂರೈಸಿದೆ. ಸ್ವಿರ್ಜಲೆಂಡ್ನ ಬಸೆಲ್ನಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಜಯಿಸುವ ಮೂಲಕ ಹೈದರಾಬಾದ್ ಆಟಗಾತಿರ್ ಐಸಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಇದಕ್ಕೂ ಮೊದಲು ಸತತ 2 ಬಾರಿ ಫೈನಲ್ ಪ್ರವೇಶಿಸಿದರೂ ಎಡವಿದ್ದ ಸಿಂಧು 3ನೇ ಯತ್ನದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಿಂಧು 21-7, 21-7 ನೇರ ಗೇಮ್ಗಳಿಂದ ಜಪಾನ್ನ ನಜೋಮಿ ಓಕುಹರಾ ಎದುರು ಕೇವಲ 38 ನಿಮಿಷಗಳಲ್ಲಿ ಜಯ ದಾಖಲಿಸಿದರು. 2017ರಲ್ಲಿ ಜಪಾನ್ ಆಟಗಾರ್ತಿ ಎದುರು 110 ನಿಮಿಷ ಹೋರಾಡಿದರೂ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧು, 2019ರಲ್ಲಿ ಗೆದ್ದು ಬೀಗಿದ್ದರು.
2017ರಲ್ಲಿ ಜಪಾನ್ ಆಟಗಾರ್ತಿ ಓಕುಹರಾ, 2018ರಲ್ಲಿ ಸ್ಪೇನ್ನ ಕ್ಯಾರೊಲಿನ್ ಮರಿನ್ಗೆ ಶರಣಾಗಿದ್ದ ಸಿಂಧು, 2019ರಲ್ಲೂ ಪ್ರಶಸ್ತಿ ಸುತ್ತಿಗೇರಲು ಯಶಸ್ವಿಯಾಗಿದ್ದರು. ಆದರೆ, ಸಿಂಧು ಈ ಬಾರಿಯಾದರೂ ಸ್ವರ್ಣ ಜಯಿಸಲಿ ಎಂಬುದೇ ಎಲ್ಲರ ಆಶಯವಾಗಿತ್ತು. ಹಿಂದೆ 4 ಬಾರಿ ವಿಶ್ವಚಾಂಪಿಯನ್ ಪದಕ ಗೆದ್ದಿದ್ದರೂ ಸ್ವರ್ಣ ಪಾತ್ರ ಸಿಂಧು ಪಾಲಿಗೆ ಮರೀಚಿಕೆಯಾಗಿತ್ತು. ಶತಯಾಗತಾಯ ಹೋರಾಡಿ ಸ್ವರ್ಣ ಗೆಲ್ಲುವ ಜಿದ್ದಿಗೆ ಇಳಿದ ಸಿಂಧು ನೀರು ಕುಡಿದಷ್ಟೇ ಸುಲಭವಾಗಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಷಟ್ಲರ್ ಎನಿಸಿಕೊಂಡರು. ವಿಶ್ವ ಚಾಂಪಿಯನ್ನಲ್ಲಿ 5 ಪದಕ ಜಯಿಸಿದ ಚೀನಾ ಜಾಂಗ್ ನಿಂಗ್ ಅವರ ದಾಖಲೆಯನ್ನು ಸಿಂಧು ಸರಿಗಟ್ಟಿದರು. 2013, 2014ರಲ್ಲಿ ಕಂಚು ಜಯಿಸಿದ್ದರು,
ಸಿಂಧು 3 ವರ್ಷ ವಿಶ್ವಚಾಂಪಿಯನ್...!
2016ರ ರಿಯೋ ಒಲಿಂಪಿಕ್ಸ್ನಲ್ಲೂ ಫೈನಲ್ ಪ್ರವೇಶಿಸಿದ್ದ ಸಿಂಧು, ಇದೀಗ ಮುಂಬರುವ ಟೋಕಿಯೊ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಸಕ್ತ ವರ್ಷ ಒಲಿಂಪಿಕ್ಸ್ ನಿಗದಿಯಾಗಿದ್ದರಿಂದ ವಿಶ್ವಚಾಂಪಿಯನ್ಷಿಪ್ ಇರಲಿಲ್ಲ. ಆದರೆ, ಕರೊನಾ ವೈರಸ್ನಿಂದಾಗಿ ಒಲಿಂಪಿಕ್ಸ್ ಮುಂದೂಡಿಕೆಯಾಗಿರುವ ಕಾರಣ ಮುಂದಿನ ವರ್ಷವೂ ವಿಶ್ವಚಾಂಪಿಯನ್ ನಡೆಯುವುದಿಲ್ಲ. ಏನಿದ್ದರೂ 2022ರವರೆಗೂ ಪಿವಿ ಸಿಂಧು ಅವರೇ ವಿಶ್ವಚಾಂಪಿಯನ್ ಆಗಿರಲಿದ್ದಾರೆ.