ಇಂದು ಬೆಂಗಳೂರಿನಲ್ಲಿ ಮುಂಬೈ-ಎಂಪಿ ದೇಶೀಯ ಟಿ20 ಪ್ರಶಸ್ತಿ ಫೈಟ್: ಚೊಚ್ಚಲ ಪ್ರಶಸ್ತಿಗೆ ಪಾಟೀದಾರ್ ಪಡೆ ಹೋರಾಟ

New Project
Published on

ಬೆಂಗಳೂರು: ದೇಶೀಯ ಕ್ರಿಕೆಟ್‌ನ ಯಶಸ್ವಿ ತಂಡ ಎನಿಸಿರುವ ಇನ್‌ಫಾರ್ಮ್ ಮುಂಬೈ ಹಾಗೂ ಮಧ್ಯಪ್ರದೇಶ ತಂಡಗಳು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಪ್ರಶಸ್ತಿಗಾಗಿ ಸೆಣಸಲಿವೆ. ಅನುಭವಿ ಶ್ರೇಯಸ್ ಅಯ್ಯರ್ ಸಾರಥ್ಯದ ಮುಂಬೈ ಗೆಲುವಿನ ಫೇವರಿಟ್ ಎನಿಸಿದರೂ, ಆರ್‌ಸಿಬಿ ಬ್ಯಾಟರ್ ರಜತ್ ಪಾಟೀದಾರ್ ನೇತೃತ್ವದ ಮಧ್ಯಪ್ರದೇಶ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.

ಎರಡೂ ತಂಡಗಳ ಮುಖಾಮುಖಿ ಬ್ಯಾಟರ್ ಹಾಗೂ ಬೌಲರ್‌ಗಳ ನಡುವಿನ ಪಂದ್ಯ ಎನಿಸಿದೆ. 2022ರ ಆವೃತ್ತಿಯ ಚಾಂಪಿಯನ್ ಮುಂಬೈ ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿದ್ದು, ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್, ಅನುಭವಿ ಅಜಿಂಕ್ಯ ರಹಾನೆ, ಶಿವಂ ದುಬೆ, ಶ್ರೇಯಸ್ ಅಯ್ಯರ್, ಪೃಥ್ವಿ ಷಾ ಅಂಥ ಸ್ಫೋಟಕ ಆಟಗಾರರನ್ನು ಹೊಂದಿದೆ. ಇದುವರೆಗೆ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 170ರ ಸ್ಟ್ರೈಕ್ ರೇಟ್‌ನಲ್ಲಿ 432 ರನ್ ಬಾರಿಸಿರುವ ರಹಾನೆ ಗರಿಷ್ಠ ರನ್ ಸ್ಕೋರರ್ ಎನಿಸಿದ್ದಾರೆ. ಹಿಂದಿನ ಮೂರು ಪಂದ್ಯಗಳಲ್ಲಿ 80 ಪ್ಲಸ್ ರನ್ ಗಳಿಸಿದ್ದಾರೆ. 329 ರನ್ ಕಲೆಹಾಕುವ ಮೂಲಕ ಶ್ರೇಯಸ್ ಅಯ್ಯರ್ ಉತ್ತಮ ಬೆಂಬಲ ಒದಗಿಸಿದರೆ, ಶಿವಂ ದುಬೆ ಫಿನಿಷರ್ ಪಾತ್ರದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಶಾರ್ದೂಲ್ ಠಾಕೂರ್ ಮುನ್ನಡೆಸುತ್ತಿರುವ ಬೌಲಿಂಗ್ ವಿಭಾಗವೂ ಬ್ಯಾಟರ್‌ಗಳಿಗೆ ಸಾಥ್ ನೀಡಿದೆ. ಸೆಮಿೈನಲ್‌ನಲ್ಲಿ ಬಲಿಷ್ಠ ಬರೋಡ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಚೊಚ್ಚಲ ಪ್ರಶಸ್ತಿಗಾಗಿ ಮಧ್ಯಪ್ರದೇಶ ಹೋರಾಟ

ಮಧ್ಯಪ್ರದೇಶ ತಂಡವನ್ನು ಫೈನಲ್‌ವರೆಗೂ ಮುನ್ನಡೆಸುವ ಮೂಲಕ ಪಾಟೀದಾರ್ ಆರ್‌ಸಿಬಿ ತಂಡದ ಭವಿಷ್ಯದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮಧ್ಯಪ್ರದೇಶ ಚಾಂಪಿಯನ್ ಎನಿಸಿದರೆ ಇದು ಪಾಟೀದಾರ್‌ಗೆ ಹೆಚ್ಚಿನ ಬಲ ತುಂಬಲಿದೆ. 201-11ರ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದು ಇದುವರೆಗಗಿನ ಅತ್ಯುತ್ತಮ ಸಾಧನೆ. 347 ರನ್ ಕಲೆಹಾಕಿರುವ ಪಾಟೀದಾರ್ ಟೂರ್ನಿಯ ಮೂರನೇ ಗರಿಷ್ಠ ರನ್ ಸ್ಕೋರರ್ ಆಗಿದ್ದು, ಐಪಿಎಲ್‌ನ ಅಚ್ಚರಿಯ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್ (210) ಮಧ್ಯಮ ಕ್ರಮಾಂಕದಲ್ಲಿ ಬಲ ಹೆಚ್ಚಿಸಿದ್ದಾರೆ. ಬೌಲಿಂಗ್‌ನಲ್ಲಿ ಆವೇಶ್ ಖಾನ್ (10 ವಿಕೆಟ್), ತ್ರಿಪುರೇಶ್ ಸಿಂಗ್ (7) ಹಾಗೂ ಸ್ಪಿನ್ನರ್ ಕುಮಾರ್ ಕಾರ್ತಿಕೇಯಾ (16) ಅವರಿಗೆ ಮುಂಬೈ ಬ್ಯಾಟರ್‌ಗಳಿಂದ ನೈಜ ಸವಾಲು ಎದುರಾಗಲಿದೆ.

ಆರಂಭ: ಸಂಜೆ 4.30

ನೇರಪ್ರಸಾರ: ಜಿಯೋ ಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net