ಧೋನಿ ವಿಚಾರವಾಗಿ ಅಂತಿಮ ನಿರ್ಧಾರಕ್ಕೆ ಬಂದ ಸಿಎಸ್​ಕೆ; ತಲಾಗಾಗಿ ಬದಲಾಗುತ್ತಾ ಐಪಿಎಲ್​​ ನಿಯಮ

MS Dhoni
Published on

ಚೆನ್ನೈ: 18ನೇ ಆವೃತ್ತಿಯ ಐಪಿಎಲ್​ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈ ಮಧ್ಯೆ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಮುಂದಿನ ವರ್ಷ ಐಪಿಎಲ್​ ಆರಂಭಕ್ಕೂ ಮುನ್ನ ನಡೆಯಲಿರುವ ಮೆಗಾ ಹರಾಜು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ತಂಡಗಳು  ಆಟಗಾರರನ್ನು ಉಳಿಸಿಕೊಳ್ಳಲು ಭರ್ಜಿ ಯೋಜನೆ ರೂಪಿಸುತ್ತಿದ್ದು, ಇದರಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಒಂದು ಹೆಜ್ಜೆ ಮುಂದಿದೆ ಎಂದು ಹೇಳಿದರೆ ತಪ್ಪಾಗಲಾರದು.

ಐಪಿಎಲ್​ ನಿಯಮದ ಪ್ರಕಾರ ಫ್ರಾಂಚೈಸಿಯೊಂದಕ್ಕೆ ನಾಲ್ವರು ಆಟಗಾರರನ್ನು ರಿಟೇನ್​ ಮಾಡುವ ಅವಕಾಶ ನೀಡಲಾಗಿದ್ದು, ಒಂದು ವೇಳೆ ಇದೇ ನಿಯಮ ಮುಂದುವರೆದಲ್ಲಿ ಧೋನಿ ಅವರನ್ನು ವಿಧಿಯಿಲ್ಲದೆ ತಂಡದಿಂದ ಕೈಬಿಡಬೇಕಾಗುತ್ತದೆ. ಹೀಗಾಗಿ ಧೋನಿಯನ್ನು ಉಳಿಸಿಕೊಳ್ಳಲು ಸಿಎಸ್​ಕೆ ಭರ್ಜರಿ ಪ್ಲ್ಯಾನ್​ ರೂಪಿಸಿದ್ದು, ಒಂದು ಹೆಜ್ಜೆ ಮುಂದೆ ಹೋಗಿದೆ ಎಂದರೆ ತಪ್ಪಾಗಲಾರದು. 

ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿಯು ತನ್ನ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದೆ. ಅಂದರೆ ಮಹೇಂದ್ರ ಸಿಂಗ್ ಧೋನಿಯನ್ನು ಅನ್​ಕ್ಯಾಪ್ಡ್​ ಪ್ಲೇಯರ್ಸ್ ಲಿಸ್ಟ್​ನಲ್ಲಿ ಉಳಿಸಿಕೊಳ್ಳಲು ಸಿಎಸ್​ಕೆ ಫ್ರಾಂಚೈಸಿ ಯೋಜನೆ ರೂಪಿಸಿದ್ದು, ಇದಕ್ಕಾಗಿ 2008ರ ಹರಾಜಿನ ನಿಯಮವನ್ನು ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ ಮಾಲೀಕರ ಮತ್ತು ಬಿಸಿಸಿಐ ಸಭೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇಂತಹದೊಂದು ಬೇಡಿಕೆಯನ್ನು ಪ್ರಸ್ತಾಪಿಸಿದೆ.

MS Dhoni 2

ಐಪಿಎಲ್​ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದು. ಆದರೆ ಈ ನಿಯಮವು ಬಳಕೆಗೆ ಬರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಆದರೀಗ ಅದೇ ನಿಯಮವನ್ನು ಜಾರಿಗೆ ತರುವಂತೆ ಸಿಎಸ್​ಕೆ ಆಗ್ರಹಿಸಿದೆ.

ಸಿಎಸ್​ಕೆ ಫ್ರಾಂಚೈಸಿಯು ಈ ನಿಯಮವನ್ನು ಜಾರಿಗೆ ತರುವಂತೆ ಆಗ್ರಹಿಸಲು ಮುಖ್ಯ ಕಾರಣ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ 5 ವರ್ಷ ಆಗುತ್ತಿರುವುದು. ಇದೀಗ ಈ ನಿಯಮ ಜಾರಿಯಾದರೆ ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಳ್ಳಬಹುದು. ಅದು ಸಹ ಕಡಿಮೆ ಮೊತ್ತವನ್ನು ನೀಡುವ ಮೂಲಕ ಎಂಬುದು ಎಲ್ಲರೂ ಗಮನಿಸಬೇಕಾದ ಸಂಗತಿ.

ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿ ಮನವಿಗೆ ಬೇರೆ ತಂಡಗಳು ವಿರೋಧಿಸಿದ್ದು, ಈ ನಿಮಯವು ಜಾರಿಗೆ ಬರುತ್ತಾ ಇಲ್ಲವಾ ಎಂಬುದೇ ಈಗ ಕುತೂಹಲವಾಗಿ ಉಳಿದಿದೆ. ಮುಂದಿನ ದಿನಗಳಲ್ಲಿ ಬಿಸಿಸಿಐ ಹಾಗೂ ಐಪಿಎಲ್​ ಆಡಳಿತ ಮಂಡಳಿ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net