

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದೇ ಮುಂದಿರುವ ಗುರಿ. ಕೋವಿಡ್-19ರಿಂದಾಗಿ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನೇ ಮುಂದೂಡಲಾಗಿದೆ. ಇದರಿಂದ ಒಲಿಂಪಿಕ್ಸ್ಗೆ ಸಿದ್ಧತೆ ಕೈಗೊಳ್ಳಲು ಸಾಕಷ್ಟು ಸಮಯ ಸಿಕ್ಕಿದೆ. ಸಮಯ ವ್ಯರ್ಥ ಮಾಡುವ ಬದಲಿಗೆ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವುದೇ ನನ್ನ ಕನಸು ಎನ್ನುತ್ತಾರೆ ಯುವ ಈಜುಪಟು ಶ್ರೀಹರಿ ನಟರಾಜ್.
ದೇಶದಾದ್ಯಂತ 21 ದಿನಗಳ ಲಾಕ್ಡೌನ್ ಇರುವುದರಿಂದ ಸರಿಯಾಗಿ ಅಭ್ಯಾಸ ಮಾಡಲಾಗು ತ್ತಿಲ್ಲ. ಕರೊನಾ ವೈರಸ್ ಭೀತಿಯಿಂದಾಗಿ ಲಾಕ್ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಮನೆಯಲ್ಲೇ ದೈಹಿಕ ಕಸರತ್ತಿನಲ್ಲಿ ತೊಡಗಿರುವ ರಾಜ್ಯದ ಯುವ ಈಜುಪಟು ‘ವಿಜಯವಾಣಿ’ ಯೊಂದಿಗೆ ತಮ್ಮ ಕನಸು ಹಂಚಿಕೊಂಡರು.
ಫಿಟ್ನೆಸ್ ದೃಷ್ಟಿಯಿಂದ ಮನೆಯಲ್ಲೇ ಕೆಲವೊಂದು ವ್ಯಾಯಾಮಗಳನ್ನು ಅಭ್ಯಾಸ ಮಾಡುತ್ತಿದ್ದೇನೆ. ಆದಷ್ಟು ಬೇಗ ಕರೊನಾ ವೈರಸ್ ಭೀತಿಯಿಂದ ಎಲ್ಲರೂ ಪಾರಾಗಿ, ಎಲ್ಲವೂ ಸಹಜ ಸ್ಥಿತಿಗೆ ಮರಳಲಿ ಎಂದು ಆಶಿಸುತ್ತೇನೆ ಎಂದರು. ಲಾಕ್ಡೌನ್ನಿಂದಾಗಿ ಅಭ್ಯಾಸಕ್ಕೆ ತೊಂದರೆಯಾಗಿರಬಹುದು, ಆದರೆ, ಇಂಥ ಕಠಿಣ ಪರಿಸ್ಥಿತಿಯನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು ಎಂದರು.
ಮನೆಯೇ ಫಿಟ್ನೆಸ್ ಸೆಂಟರ್: ಬ್ಯಾಕ್ಸ್ಟ್ರೋಕ್ನಲ್ಲಿ ಪರಿಣತಿ ಹೊಂದಿರುವ ಶ್ರೀಹರಿ, ಸಾಮಾನ್ಯ ವೇಳೆಯಲ್ಲಿ ಪ್ರತಿದಿನ 6 ಗಂಟೆ ಅಭ್ಯಾಸ ಮಾಡುತ್ತಾರೆ. ಈ ಪೈಕಿ 2 ಗಂಟೆಗಳ ಕಾಲ ಈಜುಕೊಳದಲ್ಲಿ ಅಭ್ಯಾಸಿಸಿದರೆ, ಉಳಿದ 4 ಗಂಟೆಗಳ ಜಿಮ್ಲ್ಲಿ ಕಾಲ ಕಳೆಯುತ್ತಾರಂತೆ. ಇದೀಗ ಮನೆಯೇ ಫಿಟ್ನೆಸ್ ಸೆಂಟರ್ ಆಗಿರುವುದರಿಂದ 2 ಗಂಟೆಗಳ ಕಾಲ ದೈಹಿಕ ಕಸರತ್ತು ಮಾಡುತ್ತಾರೆ. ವೈಯಕ್ತಿಕ ಫಿಟ್ನೆಸ್ ಕೋಚ್ ಮೊಬೈಲ್ನಲ್ಲಿ ನೀಡುವ ಸಲಹೆಯಂತೆ ದೈಹಿಕ ಕಸರತ್ತು ನಡೆಸುತ್ತಾರೆ. ಬೆಂಗಳೂರಿನ ಮತ್ತೀಕೆರೆಯಲ್ಲಿರುವ ಬೆಂಗಳೂರು ಈಜು ಸಂಶೋಧನಾ ಕೇಂದ್ರದಲ್ಲಿ (ಬಿಎಸ್ಆರ್ಸಿ) ಅಭ್ಯಾಸ ಮಾಡುತ್ತಿರುವ ಶ್ರೀಹರಿ ಇದುವರೆಗೆ 13 ಬಾರಿ ರಾಷ್ಟ್ರಮಟ್ಟದ ಚಾಂಪಿಯನ್ಷಿಪ್ಗಳಲ್ಲಿ ಸ್ಪರ್ಧಿಸಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಖೇಲೋ ಇಂಡಿಯಾದಲ್ಲಿ ಹಲವು ಸ್ವರ್ಣ ಪದಕ ಗಳನ್ನು ಜಯಿಸಿದ್ದಾರೆ.
ವೈಯಕ್ತಿಕವಾಗಿ ಒಲಿಂಪಿಕ್ಸ್ ಮುಂದೂಡಿರುವುದು ಖುಷಿ ನೀಡಿದೆ. ಅಭ್ಯಾಸಕ್ಕೆ ಮತ್ತಷ್ಟು ಸಮಯ ಸಿಕ್ಕಿದೆ. ಕೋವಿಡ್-19 ಲಾಕ್ಡೌನ್ನಿಂದ ಹೊರಬಂದು ಆದಷ್ಟು ಬೇಗ ಅಭ್ಯಾಸ ಆರಂಭಿಸುತ್ತೇನೆ. | ಶ್ರೀಹರಿ ನಟರಾಜ್ ಯುವ ಈಜುಪಟು