ಕರೊನಾ ಸೋಂಕು ಹರಡುವ ಭೀತಿ: ಒಲಿಂಪಿಕ್ಸ್, ಯುರೋಕಪ್ ಅನಿಶ್ಚಿತ!

olampic mar 20
Published on

ಟೋಕಿಯೊ: ಜಗತ್ತಿನ ಎಲ್ಲೆಡೆ ಕರೊನಾ ಸೋಂಕಿನ ಉಪಟಳ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಪ್ರತಿಷ್ಠಿತ ಕ್ರೀಡಾಕೂಟಗಳಾದ ಟೋಕಿಯೊ ಒಲಿಂಪಿಕ್ಸ್ ಮತ್ತು ಯುರೋ ಕಪ್ ಫುಟ್​ಬಾಲ್ ಟೂರ್ನಿ ರದ್ದುಗೊಳ್ಳುವ ಅಥವಾ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಡುವ ಸಾಧ್ಯತೆಗಳು ಹೆಚ್ಚಿವೆ. ಮಾರಕ ಸೋಂಕಿನ ಭೀತಿ ಕಾಡುತ್ತಿರುವ ದೇಶಗಳಲ್ಲೆಲ್ಲಾ ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಆರೋಗ್ಯದ ಬಗ್ಗೆಯೇ ಎಲ್ಲ ಜನರು ಹೆಚ್ಚಿನ ಕಾಳಜಿ ವಹಿಸುವಂತಾಗಿದೆ. ಹಾಲಿ ಸನ್ನಿವೇಶದಲ್ಲಿ ಆತಿಥೇಯ ಜಪಾನ್​ನಲ್ಲೂ, ಸದ್ಯಕ್ಕೆ ಒಲಿಂಪಿಕ್ಸ್ ಆಯೋಜನೆ ಸೂಕ್ತವಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಜತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿತ ವಿಶ್ವದ ಕೆಲ ನಾಯಕರು ಮತ್ತು ಹಾಲಿ-ಮಾಜಿ ಕ್ರೀಡಾಪಟುಗಳೂ ಕ್ರೀಡಾಕೂಟಗಳ ಮುಂದೂಡಿಕೆಯೇ ಉತ್ತಮ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಒಲಿಂಪಿಕ್ಸ್ ಆಯೋಜಿಸುವ ಮೂಲಕ ಜನರ ಜೀವವನ್ನು ಪಣಕ್ಕಿಡುವುದು ಸರಿಯಲ್ಲ ಎಂದು ಹಲವು ಕ್ರೀಡಾ ಪಂಡಿತರೂ ಅಭಿಪ್ರಾಯಪಡುತ್ತಿದ್ದಾರೆ. ಒಲಿಂಪಿಕ್ಸ್ ಸಿದ್ಧತೆ ಮುಂದುವರಿಯಲಿದೆ ಮತ್ತು ಕೂಟದ ಆಯೋಜನೆಗೆ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಇತ್ತೀಚೆಗಷ್ಟೇ ಘೋಷಿಸಿದ್ದರು. ಆದರೆ ಇದು ಹೇಳಿದಷ್ಟು ಸುಲಭವಲ್ಲ. ಇಂಗ್ಲಿಷ್ ಪ್ರೀಮಿಯರ್ ಲೀಗ್​ನಿಂದ ಎನ್​ಬಿಎ ಬಾಸ್ಕೆಟ್​ಬಾಲ್ ಲೀಗ್​ವರೆಗೆ ಎಲ್ಲ ಪ್ರತಿಷ್ಠಿತ ಕ್ರೀಡಾಕೂಟಗಳು ಸದ್ಯಕ್ಕೆ ಮುಂದೂಡಿಕೆಯಾಗಿವೆ. ಇನ್ನು ಜಪಾನ್​ನಲ್ಲೂ ಸದ್ಯ ಎಲ್ಲ ಕ್ರೀಡಾ ಚಟುವಟಿಕೆಗಳು ನಿಂತು ಬಿಟ್ಟಿವೆ.

ಜಪಾನ್​ನಲ್ಲಿ ಇದುವರೆಗೆ 814 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 24 ಜನರು ಮೃತಪಟ್ಟಿದ್ದಾರೆ. ಆದರೆ ಒಲಿಂಪಿಕ್ಸ್ ಸಮಯದಲ್ಲಿ ವಿದೇಶಿ ಪ್ರವಾಸಿಗರು ಬರುವುದರಿಂದ ಕರೊನಾ ಹರಡುವ ಭೀತಿ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಒಂದು ವೇಳೆ ಒಲಿಂಪಿಕ್ಸ್ ನಡೆದರೂ ನಮ್ಮ ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದು ಅನುಮಾನ. ಹೀಗಾಗಿ ಒಲಿಂಪಿಕ್ಸ್ ಆಯೋಜಿಸದಿರುವುದೇ ಉತ್ತಮ. ಕ್ರೀಡಾಕೂಟಕ್ಕಾಗಿ ಜನರ ಜೀವವನ್ನು ತ್ಯಾಗ ಮಾಡುವುದು ಸರಿಯಲ್ಲ ಎಂದು ಜಪಾನ್​ನ ಇಂಟರ್ನೆಟ್ ಕಂಪನಿ ಉದ್ಯೋಗಿ ಕೊಕಿ ಮಿಯುರಾ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಮಹಾಯುದ್ಧದ ಸಮಯವನ್ನು ಹೊರತುಪಡಿಸಿ ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕಳವಳ ಹರಡಿರುವುದನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಜಪಾನ್​ನ ಹಿರಿಯ ನಾಗರಿಕ ಸುಗವರ ಎಂಬುವವರು ತಿಳಿಸಿದ್ದಾರೆ.

ಸದ್ಯ ಜಪಾನ್​ನಲ್ಲಿ ಸಾರ್ವಜನಿಕ ಅಭಿಪ್ರಾಯವೂ ಒಲಿಂಪಿಕ್ಸ್ ಆಯೋಜನೆಗೆ ವಿರುದ್ಧವಾಗಿದೆ. ಮಾರ್ಚ್ 6-9ರಂದು ನಡೆದ ಸ್ಥಳೀಯ ಜನಾಭಿಪ್ರಾಯ ಸಂಗ್ರಹದಲ್ಲಿ ಶೇ. 45ರಷ್ಟು ಜನರು ಒಲಿಂಪಿಕ್ಸ್ ಕೂಟವನ್ನು ನಿಗದಿತ ಸಮಯದಲ್ಲೇ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಶೇ. 40ರಷ್ಟು ಜನರು ಮಾತ್ರ ಒಲಿಂಪಿಕ್ಸ್ ಪರವಾಗಿ ಮಾತನಾಡಿದ್ದಾರೆ.

ಜಪಾನ್​ನ ‘ಕ್ಯೋಡೊ’ ನ್ಯೂಸ್ ಏಜೆನ್ಸಿ ಸೋಮವಾರ 1 ಸಾವಿರಕ್ಕೂ ಅಧಿಕ ಜನರ ಅಭಿಪ್ರಾಯ ಸಂಗ್ರಹಿಸಿದಾಗ, ಒಲಿಂಪಿಕ್ಸ್ ಕೂಟವನ್ನು ನಿಗದಿಯಂತೆಯೇ ನಡೆಸುವುದು ಟೋಕಿಯೊಗೆ ಸಾಧ್ಯವಾಗುವುದಿಲ್ಲ ಎಂದು ಶೇ. 69.9 ಜನರು ಹೇಳಿದ್ದಾರೆ. ಒಲಿಂಪಿಕ್ಸ್ ರದ್ದುಗೊಳಿಸುವುದನ್ನು ಯೋಚಿಸುವುದು ಅಸಾಧ್ಯ ಎಂದು ಟೋಕಿಯೊ ಗವರ್ನರ್ ಯುರಿಕೋ ಕೋಯಿಕೆ ಹೇಳಿದ್ದರೂ, ಅಂತಿಮ ನಿರ್ಧಾರವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ (ಐಒಸಿ) ಬಿಟ್ಟಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ಟಿಕೆಟ್​ಗಳು ಈಗಾಗಲೆ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಿದ್ದರೆ, ಎಲ್ಲ ಸ್ಪರ್ಧಾ ತಾಣಗಳೂ ನಿಗದಿತ ಸಮಯದೊಳಗೆ ಪೂರ್ಣಗೊಂಡಿವೆ. -ಪಿಟಿಐ/ಏಜೆನ್ಸೀಸ್

ಒಲಿಂಪಿಕ್ಸ್​ಗೆ ಚೀನಾ ಕ್ರೀಡಾಪಟುಗಳು ಸಜ್ಜು

ಇಡೀ ಜಗತ್ತೇ ಕರೊನಾ ಸೋಂಕಿನಿಂದ ತತ್ತರಿಸಿದ್ದರೆ, ಈ ಮಹಾಮಾರಿ ಹುಟ್ಟಿಕೊಂಡ ದೇಶ ಚೀನಾ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲು ಸರ್ವಸಜ್ಜಾಗಿ ನಿಂತಿದೆ. ಚೀನಾದ ಒಲಿಂಪಿಕ್ಸ್ ಸ್ಪರ್ಧಿಗಳು ಸದ್ಯ ಯಾರೂ ತವರಿನಲ್ಲಿಲ್ಲ. ಎಲ್ಲ ಸ್ಪರ್ಧಿಗಳು ಯುರೋಪ್​ನ ಸುರಕ್ಷಿತ ಸ್ಥಳಗಳಲ್ಲಿದ್ದು, ಅವರವರ ಕ್ರೀಡೆಗಳಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಒಲಿಂಪಿಕ್ಸ್ ಸನಿಹ ಬಂದಾಗ ಅವರೆಲ್ಲರೂ ಪ್ಯಾರಿಸ್​ನ ವಿಶ್ವವಿದ್ಯಾಲಯವೊಂದರ ಆವರಣದಲ್ಲಿ ಒಗ್ಗೂಡಲಿದ್ದಾರೆ. 600ಕ್ಕೂ ಅಧಿಕ ಕ್ರೀಡಾಪಟುಗಳ ಈ ತಂಡ ಅಲ್ಲಿಂದ ನೇರವಾಗಿ ಒಲಿಂಪಿಕ್ಸ್ ನಡೆಯಲಿರುವ ಜಪಾನ್​ಗೆ ಪ್ರಯಾಣಿಸಲಿದೆ. ಕರೊನಾ ಸೋಂಕು ಇರುವ ಯಾರೊಬ್ಬರನ್ನೂ ಅವರು ವಿಮಾನದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಐಒಸಿಯ ಸಂಯೋಜಕ ಆಯೋಗದ ನಾಯಕ ಜಾನ್ ಕೋಟ್ಸ್ ವಿವರಿಸಿದ್ದಾರೆ.

ಅರ್ಹತಾ ಕೂಟಗಳು ನಡೆಯದಿರುವುದು ಹಿನ್ನಡೆ

ಇನ್ನು 5 ತಿಂಗಳಿಗೂ ಕಡಿಮೆ ಸಮಯದಲ್ಲಿ ಟೋಕಿಯೊ ಒಂದು ವೇಳೆ ಒಲಿಂಪಿಕ್ಸ್ ಆಯೋಜನೆಗೆ ಸಜ್ಜಾದರೂ, ಅದಕ್ಕೆ ಪೂರ್ವಭಾವಿಯಾಗಿ ಅರ್ಹತಾ ಕೂಟಗಳನ್ನು ನಡೆಸುವುದು ಕಷ್ಟ. ಹೀಗಾಗಿ ಸದ್ಯ ವಿವಿಧ ಕ್ರೀಡೆಗಳ ಅರ್ಹತಾ ಕೂಟಗಳು ರದ್ದು ಅಥವಾ ಮುಂದೂಡಲ್ಪಟ್ಟಿರುವುದೇ ಒಲಿಂಪಿಕ್ಸ್ ಅನ್ನು ನಿಗದಿತ ಸಮಯದಲ್ಲಿ ನಡೆಸಲು ದೊಡ್ಡ ಹಿನ್ನಡೆಯಾಗಿದೆ.

ಯುರೋಕಪ್ ಫುಟ್​ಬಾಲ್ ಉತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆ?

ಜೂನ್-ಜುಲೈನಲ್ಲಿ ನಿಗದಿಯಾಗಿರುವ ಯುರೋ ಕಪ್ ಫುಟ್​ಬಾಲ್ ಟೂರ್ನಿ 2021ರವರೆಗೆ ಮುಂದೂಡಲ್ಪಡುವ ಸಾಧ್ಯತೆ ಅಧಿಕವಾಗಿದೆ. ಕರೊನಾದಿಂದ ತತ್ತರಿಸಿರುವ ಇಟಲಿಯ ಫುಟ್​ಬಾಲ್ ಫೆಡರೇಷನ್ (ಎಫ್​ಐಜಿಸಿ) ಮೊದಲಾಗಿ ಯುರೋಕಪ್ ಮುಂದೂಡಿಕೆಗೆ ಮನವಿ ಸಲ್ಲಿಸಿದೆ. ಯುಇಎಫ್​ಎಯ ತುರ್ತು ಸಭೆ ಮಂಗಳವಾರ ವಿಡಿಯೊ ಕಾನ್ಪರೆನ್ಸ್ ಮೂಲಕ ನಡೆಯಲಿದ್ದು, ಟೂರ್ನಿ ಭವಿಷ್ಯ ನಿರ್ಧರಿಸುವ ನಿರೀಕ್ಷೆ ಇದೆ. ಇಟಲಿಯ ರೋಮ್ಲ್ಲಿ ಜೂನ್ 12ರಂದು ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಬೇಕಿದೆ. ‘ಈಗ ನಮ್ಮ ಆದ್ಯತೆ ಇರುವುದು ಜೀವವನ್ನು ರಕ್ಷಿಸಿಕೊಳ್ಳುವುದಕ್ಕೆ. ಫುಟ್​ಬಾಲ್ ಬೇಕಿದ್ದರೆ ಕಾಯುತ್ತದೆ. ನಾವು ಈ ವರ್ಷ ಯುರೋಕಪ್ ಗೆಲ್ಲಬಹುದಾದರೆ, 2021ರಲ್ಲಿ ನಡೆದರೂ ಗೆಲ್ಲುತ್ತೇವೆ’ ಎಂದು ಇಟಲಿ ತಂಡದ ಕೋಚ್ ರಾಬರ್ಟೆ ಮಾನ್​ಸಿನಿ ಹೇಳಿದ್ದಾರೆ. ಇಟಲಿಯಲ್ಲಿ ಸದ್ಯ ಏಪ್ರಿಲ್ 3ರವರೆಗೆ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ.

ಆಗಸ್ಟ್​ವರೆಗೂ ಕ್ರೀಡೆ ಸ್ಥಗಿತ?

ಯುರೋಪ್ ಖಂಡದ ಫುಟ್​ಬಾಲ್ ಚಾಂಪಿಯನ್ ತಂಡವನ್ನು ನಿರ್ಧರಿಸುವ ಪ್ರತಿಷ್ಠಿತ ಟೂರ್ನಿ ಯುರೋ ಕಪ್ ಜೂನ್ 12ರಿಂದ ಜುಲೈ 12ರವರೆಗೆ 12 ದೇಶಗಳಲ್ಲಿ ನಡೆಯಬೇಕಿದೆ. ಈ ಹಿಂದೆ ಯುರೋಪ್​ನ ಒಂದೆರಡು ದೇಶಗಳ ಆತಿಥ್ಯದಲ್ಲಿ ನಡೆಯುತ್ತಿದ್ದ 24 ತಂಡಗಳ ಟೂರ್ನಿಯನ್ನು ಈ ವರ್ಷ 12 ದೇಶಗಳಲ್ಲಿ ನಡೆಸುವ ದೊಡ್ಡ ಯೋಜನೆಯನ್ನು ಯುಇಎಫ್​ಎ ಹಾಕಿಕೊಂಡಿದೆ. ಆದರೆ ಕರೊನಾ ಕಳವಳದಿಂದಾಗಿ ಈ ವಿಫಲವಾಗುವ ಲಕ್ಷಣ ಹೆಚ್ಚಾಗಿದೆ. ಇನ್ನು 206 ದೇಶಗಳ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು 33 ಕ್ರೀಡೆಗಳಲ್ಲಿ ಸ್ಪರ್ಧಿಸುವ ಮಹಾ ಕ್ರೀಡಾಕೂಟ ಟೋಕಿಯೊ ಒಲಿಂಪಿಕ್ಸ್ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆಯಬೇಕಿದೆ. ಇವರೆರಡೂ ಕೂಟಗಳು ರದ್ದುಗೊಂಡಲ್ಲಿ ಆಗಸ್ಟ್​ವರೆಗೂ ಜಾಗತಿಕ ಕ್ರೀಡಾ ಚಟುವಟಿಕೆಗಳೇ ಸ್ಥಗಿತಗೊಳ್ಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net