ಕಳಪೆ ಫಾರ್ಮ್​ನಿಂದ ಹೊರಬರಲು ಬ್ಯಾಡ್ಮಿಂಟನ್​ ದಿಗ್ಗಜ, ಕನ್ನಡಿಗ ಪ್ರಕಾಶ್​ ಪಡುಕೋಣೆ ನೆರವು ಕೋರಿದ ಪಿವಿ ಸಿಂಧು

sindhu web
Published on

ಬೆಂಗಳೂರು: ಹಾಲಿ ವರ್ಷ ಕಳಪೆ ಫಾರ್ಮ್​ನಿಂದಾಗಿ ಸತತ ವೈಫಲ್ಯ ಕಾಣುತ್ತಿರುವ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು, ಇದೀಗ ಹಿಂದಿನ ಲಯಕ್ಕೆ ಮರಳಲು ಬ್ಯಾಡ್ಮಿಂಟನ್​ ದಿಗ್ಗಜ ಹಾಗೂ ಕನ್ನಡಿಗ ಪ್ರಕಾಶ್​ ಪಡುಕೋಣೆ ನೆರವು ಕೋರಿದ್ದಾರೆ. ಏಷ್ಯನ್​ ಗೇಮ್ಸ್​ಗೆ ಪೂರ್ವಭಾವಿಯಾಗಿ ಬೆಂಗಳೂರಿನ ಪ್ರಕಾಶ್​ ಪಡುಕೋಣೆ ಅಕಾಡೆಮಿಯಲ್ಲಿ 28 ವರ್ಷದ ಪಿವಿ ಸಿಂಧು ಒಂದು ವಾರ ಕಾಲ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಪ್ರತಿಷ್ಠಿತ ಆಲ್​ ಇಂಗ್ಲೆಂಡ್​ ಚಾಂಪಿಯನ್​ಷಿಪ್​ ಗೆದ್ದ ಮೊಟ್ಟಮೊದಲ ಭಾರತೀಯರೆಂಬ ಹೆಗ್ಗಳಿಕೆಯ ಪ್ರಕಾಶ್​ ಪಡುಕೋಣೆ, ಶಿಬಿರದಲ್ಲಿ ಸಿಂಧುಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಸಿಂಧು ಅವರ ಹೊಸ ಕೋಚ್​ ಆಗಿರುವ ಮಲೇಷ್ಯಾದ ಮುಹಮ್ಮದ್​ ಹಫಿಜ್​ ಹಾಶಿಂ ಕೂಡ ಶಿಬಿರದಲ್ಲಿದ್ದಾರೆ. ಸಿಂಧು ಶಿಬಿರದಲ್ಲಿ ಪ್ರತಿ ದಿನ 6-7 ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಿಂಧು ಹಾಲಿ ವರ್ಷ ಇದುವರೆಗೆ ಒಂದೂ ಪ್ರಶಸ್ತಿ ಗೆದ್ದಿಲ್ಲ. ಸ್ಪೇನ್​ ಮಾಸ್ಟರ್ಸ್​ನಲ್ಲಿ ರನ್ನರ್​ಅಪ್​ ಆಗಿದ್ದೇ ಶ್ರೇಷ್ಠ ಸಾಧನೆ ಎನಿಸಿದೆ. ಈ ವರ್ಷ 7 ಟೂರ್ನಿಗಳಲ್ಲಿ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಕಳೆದ ತಿಂಗಳು ವಿಶ್ವ ಚಾಂಪಿಯನ್​ಷಿಪ್​ನಲ್ಲೂ 2ನೇ ಸುತ್ತಿನಲ್ಲಿ ಸೋತಿದ್ದರು. ನಂತರ ಚೀನಾ ಓಪನ್​ನಿಂದ ಹೊರಗುಳಿದಿದ್ದರು. ಪ್ರಕಾಶ್​ ಪಡುಕೋಣೆ ಅಕಾಡೆಮಿಯ ಶಿಬಿರ ಈ ವಾರ ಮುಕ್ತಾಯಗೊಳ್ಳಲಿದ್ದು, ಬಳಿಕ ಸೆಪ್ಟೆಂಬರ್​ 12ರಿಂದ ನಡೆಯಲಿರುವ ಹಾಂಕಾಂಗ್​ ಓಪನ್​ನಲ್ಲಿ ಅವರು ಮರಳಿ ಕಣಕ್ಕಿಳಿಯಲಿದ್ದಾರೆ. ಏಷ್ಯಾಡ್​ ಸಿದ್ಧತೆಗೆ ಇದು ಅವರಿಗೆ ಕೊನೇ ಟೂರ್ನಿಯಾಗಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net