ಲಷ್ಕರ್​ ಉಗ್ರರ ಪಾರ್ಟಿಯಲ್ಲಿ ಚಿನ್ನದ ಹುಡುಗ ನದೀಮ್​; ವೈರಲ್​ ಆಗುತ್ತಿದೆ ಸಂಭಾಷಣೆಯ ವಿಡಿಯೋ

Lashkar Nadeem
Published on

ನವದೆಹಲಿ​: 33ನೇ ಆವೃತ್ತಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪಾಕಿಸ್ತಾನದ ಜಾವೆಲಿನ್​ ಆಟಗಾರ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದಿರುವ ವಿಚಾರ ಇಡೀ ವಿಶ್ವಕ್ಕೆ ತಿಳಿದಿದೆ. 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ 100 ವರ್ಷಗಳ ಒಲಿಂಪಿಕ್ಸ್​ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ನದೀಮ್​ರನ್ನು ಕ್ರೀಡಾಲೋಕ ಕೊಂಡಾಡುತ್ತಿರುವ ನಡುವೆಯೇ ಅವರ ಒಂದು ವಿಡಿಯೋ ಸಖತ್​ ವೈರಲ್​ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಚಿನ್ನದ ಹುಡುಗ ಅರ್ಷದ್​ ನದೀಮ್​ ಲಷ್ಕರ್​-ಇ-ತೋಯ್ಬಾದ ನಾಯಕ ಹ್ಯಾರಿಸ್​ ಧಾರ್​ರೊಂದಿಗೆ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಆದರೆ, ಅದು ಯಾವಾಗ ಭೇಟಿಯಾಗಿದ್ದು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ನದೀಮ್​ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ನಂತರ ಲಷ್ಕರ್​-ಇ-ತೋಯ್ಬಾ ಸಂಘಟನೆ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಸ್ಥ ಧಾರ್​ರೊಂದಿಗೆ ಅರ್ಷದ್​ ಮಾತುಕತೆಯಲ್ಲಿ ತೊಡಗಿದ್ದು, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಅರ್ಷದ್​ ಚಿನ್ನದ ಪದಕ ಗೆದ್ದಾಗ ಆತನನ್ನು ಹಾಡಿ ಹೊಗಳಿದ್ದ ನೀರಜ್​ ಚೋಪ್ರಾ ಹಾಗೂ ಅವರ ತಾಯಿಯ ವಿರುದ್ಧ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ.

ಯಾವುದೇ ಸೌಲಭ್ಯ, ಪ್ರಾಯೋಜಕತ್ವವಿಲ್ಲದೆ ಒಲಿಂಪಿಕ್ಸ್​ಗೆ ಕಾಲಿಟ್ಟಿದ್ದ ನದೀಮ್​ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಇವರ ಪ್ರತಿಭೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅನೇಕ ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳು ಅವರನ್ನು ಸಾಧನೆಯನ್ನ ಪ್ರಶಂಸಿಸುತ್ತಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ಸರ್ಕಾರವೂ ಅವರನ್ನು ಸನ್ಮಾನಿಸಲು ಸಿದ್ಧತೆ ನಡೆಸಿದೆ. ಇದರ ಭಾಗವಾಗಿ, ಅವರಿಗೆ ಭಾರಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ಘೋಷಿಸಲಾಗುತ್ತಿದೆ.

ಪಾಕಿಸ್ತಾನದ ಚಿನ್ನದ ಹುಡುಗ ಅರ್ಷದ್​ ನದೀಮ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ 10 ಕೋಟಿ ರೂ., ಸಿಂಧ್ ಸರ್ಕಾರ ಐದು ಕೋಟಿ ರೂ., ವಿಶ್ವ ಅಥ್ಲೀಟ್ ಫೆಡರೇಶನ್ ಒಂದು ಕೋಟಿ 40 ಲಕ್ಷ ಬಹುಮಾನ ಘೋಷಿಸಿದ್ದು, ಸಿಂಧ್ ಗವರ್ನರ್ ಕಮ್ರಾನ್ ತೆಸ್ಸೋರಿ, ಕ್ರಿಕೆಟಿಗ ಅಹ್ಮದ್ ಶೆಹಜಾದ್ ಮತ್ತು ಓರ್ಷ ಗಾಯಕ 30 ಲಕ್ಷಗಳನ್ನು ನೀಡಿದ್ದಾರೆ. ARYನ ಸಲ್ಮಾನ್ ಇಕ್ಬಾಲ್ ಅವರು ಒಲಿಂಪಿಯನ್ ಅರ್ಷದ್ ನದೀಮ್ ಅವರ ಐತಿಹಾಸಿಕ ವಿಜಯಕ್ಕಾಗಿ ARY ಲಗುನಾದಲ್ಲಿ ಅಪಾರ್ಟ್ಮೆಂಟ್ ನೀಡುವುದಾಗಿ ಘೋಷಿಸಿದ್ದಾರೆ. ಸದಾ ಆರ್ಥಿಕ ಬಿಕ್ಕಟ್ಟು, ಭಯೋತ್ಪಾದಕರ ದಾಳಿ ಹಾಗೂ ಬಡತನದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಇಂದು ಚಿನ್ನದ ಪದಕ ನೀಡುವ ಮೂಲಕ ಅರ್ಷದ್ ನದೀಮ್ ಹೀರೋ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net