

ಬೆಂಗಳೂರು: ವಿಶ್ವ ಜೂನಿಯರ್ ಚಾಂಪಿಯನ್ಷಿಪ್ ಕಂಚು ವಿಜೇತ ಕರ್ನಾಟಕದ ಯುವ ಷಟ್ಲರ್ ಆಯುಷ್ ಶೆಟ್ಟಿ ಕಟಕ್ನಲ್ಲಿ ನಡೆಯುತ್ತಿರುವ ಒಡಿಶಾ ಮಾಸ್ಟರ್ಸ್ ಸೂಪರ್-100 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಗೇರಿದ್ದಾರೆ. ಮಹಿಳಾ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೋ ಜತೆಗೂಡಿ ಪ್ರಶಸ್ತಿ ಸುತ್ತಿಗೇರಿದ್ದಾರೆ.
ಉಡುಪಿಯ 18 ವರ್ಷದ ಆಯುಷ್ ಶೆಟ್ಟಿ ಶನಿವಾರ ನಡೆದ ಸೆಮಿಫೈನಲ್ನಲ್ಲಿ ಇಂಡೋನೇಷ್ಯಾದ ಅಲ್ವಿ ರ್ಹಾನ್ ಎದುರು 19-21, 21-14, 22-20 ಗೇಮ್ಗಳಿಂದ ಗೆಲುವು ಸಾಧಿಸಿದರು. ಆಯುಷ್ ಪ್ರಶಸ್ತಿ ಸುತ್ತಿನಲ್ಲಿ ದೇಶಬಾಂಧವ ಸತೀಶ್ ಕುಮಾರ್ ಕರುಣಾಕರನ್ ವಿರುದ್ಧ ಸೆಣಸಲಿದ್ದಾರೆ.
ಅಶ್ವಿನಿ-ತನಿಶಾ ಜೋಡಿ ಸೆಮೀಸ್ನಲ್ಲಿ ಇಂಡೋನೇಷ್ಯಾದ ಅರ್ಲ್ಯಾ ನಬಿಲ ಥೀಸ ಮುಂಗರನ್ ಮತ್ತು ಅಗ್ನಿಯಾ ಶ್ರೀ ರಹಯು ಜೋಡಿಯನ್ನು 21-17, 21-13ರಿಂದ ಸೋಲಿಸಿದರು. ಇದರೊಂದಿಗೆ ಅಶ್ವಿನಿ ಜೋಡಿ ಸತತ 3ನೇ ವಾರದ ಟೂರ್ನಿಯಲ್ಲಿ ಫೈನಲ್ಗೇರಿದಂತಾಗಿದೆ. ಮೊದಲಿಗೆ ಲಖನೌದಲ್ಲಿ ನಡೆದ ಸಯ್ಯದ್ ಮೋದಿ ಸೂಪರ್-300 ಟೂರ್ನಿಯಲ್ಲಿ ರನ್ನರ್ಅಪ್ ಆಗಿದ್ದ ಅಶ್ವಿನಿ ಜೋಡಿ, ಕಳೆದ ವಾರ ಗುವಾಹಟಿ ಮಾಸ್ಟರ್ಸ್ ಸೂಪರ್-100 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು.