ಏಕದಿನ ಕ್ರಿಕೆಟ್‌ನಲ್ಲಿ ನನ್ನ ದಾಖಲೆ ಉತ್ತಮವಾಗಿಲ್ಲ ಎಂದ ಚುಟುಕು ಕ್ರಿಕೆಟ್‌ನ ವಿಶ್ವ ನಂ.1 ಬ್ಯಾಟರ್

suryaaa
Published on

ಪ್ರಾವಿಡೆನ್ಸ್ (ಗಯಾನಾ): ಏಕದಿನ ಕ್ರಿಕೆಟ್‌ನಲ್ಲಿ ನನ್ನ ಬ್ಯಾಟಿಂಗ್ ದಾಖಲೆ ಉತ್ತಮವಾಗಿಲ್ಲ. ಆದರೆ ಮುಂಬರುವ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಪಂದ್ಯದ ಕೊನೇ 15-18 ಓವರ್‌ಗಳಲ್ಲಿ ಕನಿಷ್ಠ 45-50 ಎಸೆತಗಳನ್ನು ಆಡುವಂತೆ ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ಜವಾಬ್ದಾರಿ ನೀಡಿದೆ ಎಂದು ವಿಶ್ವ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ವಿಂಡೀಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ 44 ಎಸೆತಗಳಲ್ಲಿ 83 ರನ್‌ಗಳಿಸಿ ಟೀಮ್ ಇಂಡಿಯಾದ 7 ವಿಕೆಟ್ ಗೆಲುವಿನ ರೂವಾರಿ ಎನಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೂರ್ಯ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಏಕದಿನದಲ್ಲಿ ನನ್ನ ಪ್ರದರ್ಶನ ಕಳಪೆಯಾಗಿದೆ ಹಾಗೂ ಇದನ್ನು ಒಪ್ಪಿಕೊಳ್ಳುವಲ್ಲಿ ನನಗೆ ಯಾವುದೇ ಮುಜುಗರವಿಲ್ಲ. ಏಕೆಂದರೆ ನಾವೆಲ್ಲರೂ ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತೇವೆ. ಆದ್ದರಿಂದ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ. ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ರಾಹುಲ್ ದ್ರಾವಿಡ್ ಏಕದಿನ ಮಾದರಿಯಲ್ಲಿ ಹೆಚ್ಚಿನ ಗಮನಹರಿಸುವಂತೆ ತಿಳಿಸಿದ್ದಾರೆ. ಕೊನೆಯ 10-15 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ತಂಡಕ್ಕಾಗಿ ಏನು ಮಾಡಬಹುದು ಎಂದು ಯೋಚಿಸಿ. ನೀವು 45 ರಿಂದ 50 ಎಸೆತಳನ್ನು ಆಡಲು ನಾವು ಬಯಸುತ್ತೇವೆ ಎಂದು ಅವರಿಬ್ಬರೂ ಸಲಹೆ ನೀಡಿದ್ದಾರೆ. ನನಗೆ ನೀಡಿರುವ ಜವಾಬ್ದಾರಿ ಅವಕಾಶವಾಗಿ ಪರಿವರ್ತನೆಯಾಗಿದೆ ಎಂದು ಅವರು ಹೇಳಿದರು.

ವಿಂಡೀಸ್ ವಿರುದ್ಧ ನಾನು ವಿಶೇಷವಾಗಿ ಏನನ್ನೂ ಪ್ರಯತ್ನಿಸಿಲ್ಲ. ಕಳೆದ ಎರಡು ವರ್ಷಗಳಲ್ಲಿ ಹೇಗೆ ಬ್ಯಾಟಿಂಗ್ ನಡೆಸುತ್ತಿದ್ದೆ ಆದೇ ರೀತಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ದಾಖಲೆಗಳ ಬಗ್ಗೆ ಯಾವುದೇ ಯೋಚನೆಗಳಿಲ್ಲ. 47 ರನ್ ಹಾಗೂ 97 ರನ್‌ಗಳಿಸಿದಾಗ ಒಂದೇ ಶೈಲಿಯಲ್ಲಿ ಬ್ಯಾಟಿಂಗ್ ನಡೆಸುತ್ತೇನೆ ಎಂದರು. ತಿಲಕ್ ವರ್ಮ ನಾನು ಒಟ್ಟಿಗೆ ಆಡಿದ್ದು,ವಯಸ್ಸಿಗೂಮೀರಿದ ಪ್ರಬುದ್ಧತೆ ತೋರಿಸಿದ್ದಾರೆ. ಮೂರನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ, ತೋರಿದ ಪ್ರಬುದ್ಧತೆ, ಗೆಲುವಿನ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ತಿಲಕ್ ವರ್ಮ ಒಬ್ಬ ಸ್ಟಾರ್ ಎಂದು ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net