ಮನಗೆದ್ದ ರಾಹುಲ್ ಸ್ವಿಚ್​ಹಿಟ್: ಕನ್ನಡಿಗನ 360 ಡಿಗ್ರಿ ಬ್ಯಾಟಿಂಗ್​ಗೆ ಮೆಚ್ಚುಗೆ

Rahul
Published on

ಹ್ಯಾಮಿಲ್ಟನ್: ಕಳೆದ ವರ್ಷಾರಂಭದಲ್ಲಿ ಕಾಫಿ ವಿತ್ ಕರಣ್ ವಿವಾದದಿಂದಾಗಿ ಟೀಕೆಗಳಿಗೆ ಗುರಿಯಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ಹಾಲಿ ವರ್ಷಾರಂಭದಲ್ಲಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಟೀಮ್ ಇಂಡಿಯಾದಲ್ಲಿ ತಮಗೆ ನೀಡಲಾಗುವ ಎಲ್ಲ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಕೆಎಲ್ ರಾಹುಲ್ ತಂಡದ ಆಧಾರಸ್ತಂಭವಾಗುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ಸ್ಪೋಟಕ ಇನಿಂಗ್ಸ್ ಮೂಲಕ ತಂಡದ ಮೊತ್ತ ಏರಿಸಿದ ಕೆಎಲ್ ರಾಹುಲ್, ಆಕರ್ಷಕ ಸ್ವಿಚ್ ಹಿಟ್ ಮೂಲಕ ಭರ್ಜರಿ ಸಿಕ್ಸರ್ ಸಿಡಿಸಿ ಗಮನ ಸೆಳೆದರು.

ಜಿಮ್ಮಿ ನೀಶಾಮ್ ಎಸೆತದಲ್ಲಿ ರಾಹುಲ್ ಆಡಿದ ಈ ಪರಿಪೂರ್ಣ ಹೊಡೆತ ಭಾರಿ ಮೆಚ್ಚುಗೆಗೂ ಪಾತ್ರವಾಗಿದೆ. ಮಾಜಿ ಆಟಗಾರ ಹಾಗೂ ಹಾಲಿ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಂಜ್ರೇಕರ್, ರಾಹುಲ್ ಆಟವನ್ನು ‘360 ಡಿಗ್ರಿ’ ಎಂದು ಬಣ್ಣಿಸಿದ್ದು, ‘ಕೆಎಲ್ ರಾಹುಲ್ ಅವರಿಂದ ಮಾತ್ರ 360 ಡಿಗ್ರಿ ಬ್ಯಾಟಿಂಗ್​ಅನ್ನೂ ಶಾಸ್ತ್ರೀಯ ಮತ್ತು ಕಲಾತ್ಮಕವಾಗಿ ಕಾಣಿಸುವಂತೆ ಆಡಲು ಸಾಧ್ಯ’ ಎಂದಿದ್ದಾರೆ.

ಎಲ್ಲ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ರಾಹುಲ್​ರನ್ನು ಮಾಜಿ ಆಟಗಾರ ಮೊಹಮದ್ ಕೈಫ್, ‘ಭಾರತದ ಸ್ವಿಸ್ ನೈಫ್’ (ಬಹುರೀತಿಯಲ್ಲಿ ಬಳಸ ಬಹುದಾದ ಚೂರಿ) ಎಂದು ಶ್ಲಾಘಿಸಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಎಬಿ ಡಿವಿಲಿಯರ್ಸ್ ‘360 ಡಿಗ್ರಿ ಬ್ಯಾಟ್ಸ್​ಮನ್’ ಎಂದೇ ಜನಪ್ರಿಯರು. ರಾಹುಲ್ ಈಗ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸುವ ಸಾಮರ್ಥ್ಯದಿಂದ ಮಿಂಚುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net