ಇಂದು ನ್ಯೂಜಿಲೆಂಡ್- ಅಫ್ಘಾನಿಸ್ತಾನ ಹಣಾಹಣಿ, ಭಾರತದ ಪಾಲಿಗೂ ನಿರ್ಣಾಯಕ ಈ ಪಂದ್ಯ

martin guptill for web
Published on

ಅಬುಧಾಬಿ: ಹ್ಯಾಟ್ರಿಕ್ ಗೆಲುವಿನಿಂದ ಆತ್ಮವಿಶ್ವಾಸದ ಅಲೆಯಲ್ಲಿ ಬೀಗುತ್ತಿರುವ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ ನಿರ್ಣಾಯಕ ಹಣಾಹಣಿಯಲ್ಲಿ ಭಾನುವಾರ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಕಿವೀಸ್ ತಂಡದ ಪಾಲಿಗೆ ಈ ಪಂದ್ಯ ಕ್ವಾರ್ಟರ್ ಫೈನಲ್‌ನಂತಿದ್ದು ಗೆದ್ದರೆ ಸೆಮಿಫೈನಲ್ ಹಂತ ಖಾತ್ರಿಯಾಗಲಿದೆ. ಮತ್ತೊಂದೆಡೆ, ಭಾರತದ ಪಾಲಿಗೂ ಈ ಪಂದ್ಯ ಮಹತ್ವ ಪಡೆದಿದ್ದು, ಒಂದು ವೇಳೆ ಕಿವೀಸ್ ಸೋತರಷ್ಟೇ ಸೆಮೀಸ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ. ಪಾಕ್ ಎದುರು ಸೋತ ಬಳಿಕ, ಆಡಿದ ಮೂರು ಪಂದ್ಯಗಳಲ್ಲೂ ಭರ್ಜರಿ ಗೆಲುವು ದಾಖಲಿಸಿರುವ ಕೇನ್ ವಿಲಿಯಮ್ಸನ್ ಪಡೆ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದೆ.

* ಕಿವೀಸ್‌ಗೆ ಗೆಲುವೊಂದೇ ಮಾರ್ಗ

ಎದುರಾಳಿ ತಂಡ ದುರ್ಬಲವಾಗಿದ್ದರೂ ನ್ಯೂಜಿಲೆಂಡ್ ತಂಡಕ್ಕೆ ಎಚ್ಚರಿಕೆ ನಿರ್ವಹಣೆ ಅಗತ್ಯ. ಸದ್ಯ 6 ಪಾಯಿಂಟ್ಸ್ ಹೊಂದಿರುವ ನ್ಯೂಜಿಲೆಂಡ್ ತಂಡ, ಎರಡನೇ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಗುಂಪಿನಿಂದ ಪಾಕಿಸ್ತಾನ ಸೆಮೀಸ್ ಹಂತ ಖಾತ್ರಿಪಡಿಸಿಕೊಂಡಿದ್ದು, ಉಳಿದಿರುವ ಮತ್ತೊಂದು ಸ್ಥಾನಕ್ಕೆ ನ್ಯೂಜಿಲೆಂಡ್ ಪ್ರಬಲ ಆಕಾಂಕ್ಷಿಯಾಗಿದೆ. ಶುಕ್ರವಾರ ನಮೀಬಿಯ ಎದುರು ಸುಲಭ ಜಯ ದಾಖಲಿಸಿರುವ ನ್ಯೂಜಿಲೆಂಡ್ ತಂಡ, ಅಫ್ಘಾನಿಸ್ತಾನ ಎದುರು ಪ್ರಬಲ ಪೈಪೋಟಿಗೆ ಸಜ್ಜಾಗಿದೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ ಹೊಂದಿರುವ ನ್ಯೂಜಿಲೆಂಡ್, ಅಫ್ಘಾನಿಸ್ತಾನ್‌ಗೆ ಹೋಲಿಸಿದರೆ ಬಲಿಷ್ಠವಾಗಿದೆ.

* ಭಾರತಕ್ಕೆ ನಿರ್ಣಾಯಕ ದಿನ

ಭಾರತ ತಂಡದ ಸೆಮಿಫೈನಲ್ ಆಸೆ ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಮೇಲೆ ಅವಲಂಭಿಸಿದೆ. ಅಬುಧಾಬಿಯಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸೋಲಬೇಕೆಂದು ಟಿಮ್ ಇಂಡಿಯಾ ಅಭಿಮಾನಿಗಳು ಪ್ರಾರ್ಥಿಸಬೇಕಿದೆ. ಕಿವೀಸ್ ತಂಡ ಸೋತರಷ್ಟೇ ಭಾರತಕ್ಕೆ ಸೆಮೀಸ್ ಅವಕಾಶ ಉಳಿಯಲಿದೆ. ಒಂದು ವೇಳೆ ಕೇನ್ ವಿಲಿಯಮ್ಸನ್ ಪಡೆ ಗೆದ್ದರೆ ಸೋಮವಾರ ನಮೀಬಿಯ ವಿರುದ್ಧದ ಪಂದ್ಯ ಭಾರತದ ಪಾಲಿಗೆ ಔಪಚಾರಿಕವಾಗಲಿದೆ.

ಮೊದಲ ಮುಖಾಮುಖಿ: ಉಭಯ ತಂಡಗಳು ಮೊದಲ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ಎದುರಾಗುತ್ತಿವೆ. ಇದಕ್ಕೂ ಮೊದಲು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಎರಡು ಬಾರಿ ಎದುರಾಗಿದ್ದು, 2015 ಹಾಗೂ 2019ರ ಟೂರ್ನಿಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ತಂಡ 6 ಮತ್ತು 7 ವಿಕೆಟ್‌ಗಳಿಂದ ಜಯ ದಾಖಲಿಸಿತ್ತು.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

=================

* ಅಜೇಯ ಸಾಧನೆಗೆ ಪಾಕ್ ಸಜ್ಜು

ಶಾರ್ಜಾ: ಸತತ ನಾಲ್ಕು ಗೆಲುವಿನಿಂದ ಸೆಮೀಸ್ ಹಂತ ಖಾತ್ರಿಪಡಿಸಿಕೊಂಡಿರುವ ಪಾಕ್ ತಂಡ ಲೀಗ್ ಹಂತದ ತನ್ನ ಕಡೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ಹಂತಕ್ಕೂ ಮುನ್ನ ಪಾಕ್ ಪಾಲಿಗೆ ಈ ಪಂದ್ಯ ಅಭ್ಯಾಸ ಪಂದ್ಯದಂತಿದೆ. ಮೊದಲ ಸುತ್ತಿನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆದ್ದು ಸೂಪರ್-12 ಹಂತಕ್ಕೇರಿದ್ದ ಸ್ಕಾಟ್ಲೆಂಡ್ ತಂಡ, ಸತತ 4 ಸೋಲು ಕಂಡಿದ್ದು, ತಂಡದ ಪಾಲಿಗೆ ಈ ಪಂದ್ಯ ಔಪಚಾರಿಕವಾಗಿದೆ.

ಮುಖಾಮುಖಿ: 3, ಪಾಕಿಸ್ತಾನ: 3, ಸ್ಕಾಟ್ಲೆಂಡ್: 0

ಟಿ20 ವಿಶ್ವಕಪ್‌ನಲ್ಲಿ: ಪಾಕಿಸ್ತಾನ: 1, ಸ್ಕಾಟ್ಲೆಂಡ್: 0

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net