ಭಜರಂಗ್​ ಬಳಿಕ ಪದ್ಮಶ್ರೀ ಪ್ರಶಸ್ತಿ ಮರಳಿಸಿದ ಮತ್ತೋರ್ವ ಪೈಲ್ವಾನ್​ ವಿಜೇಂದರ್​ ಸಿಂಗ್​ ಯಾದವ್​!​

padma web
Published on

ನವದೆಹಲಿ: ಬ್ರಿಜ್​ ಆಪ್ತ ಸಂಜಯ್​ ಸಿಂಗ್​ ಡಬ್ಲ್ಯುಎಫ್​ಐ ಚುಕ್ಕಾಣಿ ಹಿಡಿದಿರುವುದನ್ನು ಪ್ರತಿಭಟಿಸಿ ಮತ್ತೋರ್ವ ಕುಸ್ತಿಪಟು ವಿಜೇಂದರ್​ ಸಿಂಗ್​ ಯಾದವ್​ ಕೂಡ ಪದ್ಮಶ್ರೀ ಪ್ರಶಸ್ತಿ ಮರಳಿಸಲು ನಿರ್ಧರಿಸಿದ್ದಾರೆ. "ಗೂಂಗಾ ಪೈಲ್ವಾನ್​' ಎಂದೇ ಖ್ಯಾತರಾಗಿರುವ ಕಿವುಡ ಕುಸ್ತಿಪಟು ವಿಜೇಂದರ್​ ಡೆಫ್​ಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿದ್ದರು ಮತ್ತು 2021ರಲ್ಲಿ ಅವರಿಗೆ ಪದ್ಮಶ್ರೀ ಲಭಿಸಿತ್ತು.

ನಾನು ದೇಶದ ಹೆಣ್ಣು ಮಕ್ಕಳೊಂದಿಗೆ ನಿಲ್ಲುವೆ ಎಂದಿರುವ ವಿಜೇಂದರ್​, ಸಚಿನ್​ ತೆಂಡುಲ್ಕರ್​, ನೀರಜ್​ ಚೋಪ್ರಾರಂಥ ಕ್ರೀಡಾಪಟುಗಳೂ ಈ ವಿವಾದದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.

ಪದ್ಮಶ್ರೀ ವಾಪಸ್​ಗೆ ಪ್ರತಿಕ್ರಿಯಿಸಲು ಅನುರಾಗ್​ ನಕಾರ: ಬ್ರಿಜ್​ಭೂಷಣ್​ ಶರಣ್​ ಸಿಂಗ್​ ಆಪ್ತ ಸಂಜಯ್​ ಸಿಂಗ್​ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಪ್ರತಿಭಟಿಸಿ ಕುಸ್ತಿಪಟು ಭಜರಂಗ್​ ಪೂನಿಯಾ ಪದ್ಮಶ್ರೀ ಪ್ರಶಸ್ತಿ ಮರಳಿಸಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ನಿರಾಕರಿಸಿದ್ದಾರೆ.

ಶನಿವಾರ ಬೆಂಗಳೂರಿನ ಸಾಯ್​ ಕೇಂದ್ರಕ್ಕೆ ಭೇಟಿ ನೀಡಿದ ಅನುರಾಗ್​, "ಈ ಬಗ್ಗೆ ಈಗಾಗಲೆ ಸಾಕಷ್ಟು ಮಾತನಾಡಿರುವೆ. ಇನ್ನೇನೂ ಹೆಚ್ಚಿಗೆ ಹೇಳಲು ಬಾಕಿ ಉಳಿದಿಲ್ಲ. ನಮ್ಮ ಕ್ರೀಡಾಪಟುಗಳು ಏಷ್ಯನ್​ ಗೇಮ್ಸ್​ನಲ್ಲಿ 100 ಪದಕಗಳನ್ನು ಗೆದ್ದಿದ್ದಾರೆ. ಇಂಥ ಸುದ್ದಿಗಳನ್ನು ಹೈಲೈಟ್​ ಮಾಡಬೇಕಾದ ಅಗತ್ಯವಿದೆ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net