ಕ್ರಿಕೆಟ್​ಗೆ ಯಾಕೆ ಶಿಕ್ಷೆ? ಈಗ ಕ್ರಿಕೆಟ್​ನಿಂದ ದೂರ ಈ ಸ್ಮರಣೀಯ ತಾಣ

photo (3)
Published on

| ಪ್ರಸಾದ್ ಶೆಟ್ಟಿಗಾರ್

ಬೆಂಗಳೂರಿನ ಹೃದಯ ಭಾಗದಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಂ, ಕನ್ನಡಿಗರ ಹೃದಯದಲ್ಲೂ ವಿಶೇಷ ಸ್ಥಾನ ಪಡೆದಿದೆ. ಇದು ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ತಾಣವಾಗಿಯೂ ಹಲವಾರು ಸ್ಮರಣೀಯ ನೆನಪುಗಳನ್ನು ಕಟ್ಟಿಕೊಟ್ಟಿದೆ. ಕರ್ನಾಟಕ ಕ್ರಿಕೆಟ್​ನಲ್ಲಿ ಹಲವು ತಾರೆಯರ ಹುಟ್ಟಿಗೆ ಕಾರಣವಾಗಿದೆ. 50 ವರ್ಷಗಳಿಗೂ ಅಧಿಕ ಸಮಯದಿಂದ ಭಾರತೀಯ ಕ್ರಿಕೆಟ್​ನ ವಿಶೇಷ ಭಾಗವಾಗಿದೆ. ಆದರೆ ಎರಡೂವರೆ ತಿಂಗಳ ಹಿಂದೆ, ಆರ್​ಸಿಬಿ ತಂಡದ ಐಪಿಎಲ್ ಟ್ರೋಫಿ ಗೆಲುವಿನ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟ ಬಳಿಕ ಕ್ರಿಕೆಟ್ ಚಟುವಟಿಕೆಯಿಲ್ಲದೆ ಸಂಪೂರ್ಣ ಸ್ತಬ್ಧವಾಗಿದೆ.

ಆ ದಿನ ಪ್ರವಾಹದಂತೆ ಹರಿದುಬಂದ ಲಕ್ಷಾಂತರ ಜನರನ್ನು ನಿಯಂತ್ರಿಸಲಾಗದೆ, ವ್ಯವಸ್ಥಿತ ಯೋಜನೆ ಇಲ್ಲದೆ ಮತ್ತು ಗಡಿಬಿಡಿಯಲ್ಲಿ ಆಯೋಜಿಸಿದ ಆ ಕಾರ್ಯಕ್ರಮ, ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತಿತ್ತು. ಆದರೆ ಅದರ ಶಿಕ್ಷೆಯನ್ನು ಈಗ ಕ್ರಿಕೆಟ್​ಗೆ ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ನೀಡಲಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ನಷ್ಟು ಕ್ರಿಕೆಟ್ ಪಂದ್ಯಗಳ ಆನಂದವನ್ನು ಸವಿಯಲು ತಡೆಯೊಡ್ಡಲಾಗುತ್ತಿದೆ. ‘ಕರ್ನಾಟಕದ ಐಪಿಎಲ್’ ಖ್ಯಾತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿ ಪೊಲೀಸರ ಅನುಮತಿ ದೊರೆಯದ ಕಾರಣ ಮೈಸೂರಿಗೆ ಸ್ಥಳಾಂತರಗೊಂಡಿತ್ತು. ಇದೀಗ ಪ್ರತಿಷ್ಠಿತ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಮತ್ತು ಫೈನಲ್ ಸಹಿತ 5 ಪ್ರಮುಖ ಪಂದ್ಯಗಳ ಆಯೋಜನೆಯ ಅವಕಾಶವೂ ಚಿನ್ನಸ್ವಾಮಿ ಸ್ಟೇಡಿಯಂ ಕೈತಪ್ಪಿದೆ. ಮುಂದಿನ ವರ್ಷ ಭಾರತದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್, ಐಪಿಎಲ್ 19ನೇ ಆವೃತ್ತಿಯ ಪಂದ್ಯಗಳು ಮತ್ತು ಮುಂಬರುವ ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಆತಿಥ್ಯವೂ ಚಿನ್ನಸ್ವಾಮಿ ಸ್ಟೇಡಿಯಂ ಕೈತಪು್ಪವ ಭೀತಿ ಎದುರಾಗಿದೆ.

ಅಂಗೈ ಹುಣ್ಣಿಗೆ ಕೈ ಕತ್ತರಿಸಬೇಕೇ?

ಕಾಲ್ತುಳಿತ ದುರಂತ ಕರ್ನಾಟಕದ ಇತಿಹಾಸದಲ್ಲಿ ಒಂದು ಕಹಿ ನೆನಪಾಗಿದೆ. ಇದರ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಆಗಲಿ. ಆದರೆ, ಕಾಲ್ತುಳಿತ ಕಾರಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕ್ರಿಕೆಟ್ ಚಟುವಟಿಕೆಯನ್ನೇ ದೂರವಿಟ್ಟಿರುವ ನಡೆ ಕರ್ನಾಟಕ ಕ್ರಿಕೆಟ್ ಬೆಳವಣಿಗೆಗೆ ಬಹುದೊಡ್ಡ ಹೊಡೆತವಾಗಿದೆ. ಸ್ಟೇಡಿಯಂನಲ್ಲಿ ಕ್ರಿಕೆಟ್ ಆಯೋಜನೆಗೆ ಅನುಮತಿ ನೀಡುವ ಮುನ್ನ ಮಕ್ಕಳ-ಮಹಿಳೆಯರ ಸುರಕ್ಷತೆ ಮತ್ತು ಸೂಕ್ತ ರ್ಪಾಂಗ್ ವ್ಯವಸ್ಥೆ ಸುಧಾರಣೆ ಆಗಬೇಕಿದ್ದರೆ, ತುರ್ತಾಗಿ ಕ್ರಮ ತೆಗೆದುಕೊಳ್ಳಲಿ. ಪ್ರತಿ ಕ್ರಿಕೆಟಿಗ, ಕ್ರಿಕೆಟ್ ಪ್ರೇಮಿಯ ಪಾಲಿಗೂ ಹೆಮ್ಮೆ ಮತ್ತು ಸ್ಮರಣೀಯವೆನಿಸಿರುವ ಚಿನ್ನಸ್ವಾಮಿ ಸ್ಟೇಡಿಯಂ ಪಳೆಯುಳಿಕೆಯಾಗಿ ಇತಿಹಾಸದ ಪುಟ ಸೇರಲು ಅವಕಾಶ ನೀಡಬಾರದು. ಸ್ಟೇಡಿಯಂ ಅಸುರಕ್ಷಿತ ಎಂಬ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿಕುನ್ಹಾ ಆಯೋಗದ ವರದಿಯ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ವ್ಯವಸ್ಥೆಗಳ ಸುಧಾರಣೆಯೊಂದಿಗೆ ಸ್ಟೇಡಿಯಂಗೆ ಶೀಘ್ರದಲ್ಲೇ ಕ್ರಿಕೆಟ್ ಚಟುವಟಿಕೆ ಮತ್ತೆ ಮರಳಬೇಕು ಎನ್ನುವುದು ಕ್ರಿಕೆಟ್ ಪ್ರೇಮಿಗಳ ಕಳಕಳಿಯಾಗಿದೆ.

ಪಂದ್ಯದ ವೇಳೆ ಕಹಿ ಘಟನೆಗಳಿಲ್ಲ...

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50 ವರ್ಷಗಳಲ್ಲಿ 60ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯ, ನೂರಾರು ಐಪಿಎಲ್, ದೇಶೀಯ, ಮಹಿಳಾ, ಜೂನಿಯರ್ ಪಂದ್ಯ ಆಯೋಜನೆಗೊಂಡಿವೆ. ಒಮ್ಮೆಯೂ ಕಹಿ ಘಟನೆಗಳಾಗಿಲ್ಲ. ಆದರೆ ಕಾಲ್ತುಳಿತ ದುರಂತದ ವೇಳೆ ಎಲ್ಲರಿಗೂ ಉಚಿತ ಪ್ರವೇಶದ ಘೋಷಣೆ ಮಾಡಿದ್ದೇ ಎಡವಟ್ಟಿಗೆ ಪ್ರಮುಖ ಕಾರಣವಾಗಿತ್ತು. 34-35 ಸಾವಿರ ಆಸನ ವ್ಯವಸ್ಥೆಯ ಸ್ಟೇಡಿಯಂಗೆ 3 ಲಕ್ಷ ಮಂದಿ ಧಾವಿಸಿದ್ದರಿಂದ ಅವ್ಯವಸ್ಥೆ ಉಂಟಾಗಿತ್ತು. ಕ್ರೀಡಾಂಗಣದ ಹೊರಭಾಗದಲ್ಲಿ ಆಗಿರುವ ದುರಂತಕ್ಕೆ, ಕ್ರಿಕೆಟ್ ಪಂದ್ಯಗಳ ಆಯೋಜನೆ ನಿಲ್ಲಿಸಿರುವುದು ಅತಿಯಾದ ಕ್ರಮ ಎನಿಸಿದೆ. 2011ರ ಏಕದಿನ ವಿಶ್ವಕಪ್ ಪಂದ್ಯಗಳ ಕೌಂಟರ್ ಟಿಕೆಟ್ ಮಾರಾಟದ ವೇಳೆ ಲಾಠಿಚಾರ್ಜ್ ಆಗಿತ್ತು. ನಂತರದಲ್ಲಿ ಆನ್​ಲೈನ್ ಟಿಕೆಟ್ ಮಾರಾಟ ವ್ಯವಸ್ಥೆಯ ಮೂಲಕ ನೂಕುನುಗ್ಗಲು ತಪ್ಪಿಸಲಾಗಿತ್ತು. ಅದೇ ರೀತಿ ಈಗಲೂ, ಕ್ರಿಕೆಟ್ ಸ್ಥಗಿತಕ್ಕಿಂತ ವ್ಯವಸ್ಥೆಯ ಸುಧಾರಣೆಯೇ ಸರಿಯಾದ ದಾರಿ.

ಐಪಿಎಲ್​ನಲ್ಲಿ ರನ್​ ಮಳೆ

ಚಿನ್ನಸ್ವಾಮಿ ಸ್ಟೇಡಿಯಂ, ಐಪಿಎಲ್ ರನ್ ಪ್ರವಾಹದಿಂದಲೂ ಹಲವಾರು ದಾಖಲೆಗಳಿಗೆ ವೇದಿಕೆ ಎನಿಸಿದೆ. 2008ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಕೆಕೆಆರ್ ತಂಡದಲ್ಲಿದ್ದ ಬ್ರೆಂಡನ್ ಮೆಕ್ಕಲಂ ಅಜೇಯ 158 ರನ್ ಸಿಡಿಸಿ, ವಿಶ್ವದ ಶ್ರೀಮಂತ ಟಿ20 ಲೀಗ್​ಗೆ ಅಮೋಘ ಚಾಲನೆ ನೀಡಿದ್ದರು. 2013ರಲ್ಲಿ ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ ಆರ್​ಸಿಬಿ ಪರ ಅಜೇಯ 175 ರನ್ ಸಿಡಿಸಿ ವಿಶ್ವದಾಖಲೆ ಬರೆದಿದ್ದರು. ಪುಣೆ ವಾರಿಯರ್ಸ್ ಎದುರು 263 ರನ್ ಸಿಡಿಸಿದ್ದು ಆಗ ಗರಿಷ್ಠ ಮೊತ್ತವಾಗಿತ್ತು. ನಂತರ 2024ರಲ್ಲಿ ಸನ್​ರೈಸರ್ ತಂಡ ಆರ್​ಸಿಬಿ ವಿರುದ್ಧ 287 ರನ್ ಸಿಡಿಸಿ ಇಲ್ಲೇ ಹೊಸ ಐಪಿಎಲ್ ದಾಖಲೆ ಬರೆದಿತ್ತು. ಇಲ್ಲಿ ಕೊಹ್ಲಿ ಆರ್​ಸಿಬಿ ಪರ 3 ಸಾವಿರಕ್ಕೂ ಅಧಿಕ ರನ್ ಸಿಡಿಸಿದ್ದಾರೆ.

ಸ್ಟೇಡಿಯಂನ ವಿಶೇಷಗಳಿವು...

ಚಿನ್ನಸ್ವಾಮಿ ಸ್ಟೇಡಿಯಂ ದೇಶದಲ್ಲೆ ಮಾದರಿ ಸ್ಟೇಡಿಯಂ ಎನಿಸಿದೆ. ಇಲ್ಲಿ ಮಳೆ ನಿಂತ 20 ನಿಮಿಷಗಳಲ್ಲೇ ಪಂದ್ಯ ಆರಂಭಿಸಬಹುದಾಗಿದೆ. 2017ರಲ್ಲಿ ಅಳವಡಿಸಲಾಗಿರುವ ಸಬ್-ಏರ್ ಸಿಸ್ಟಮ್ ಇದಕ್ಕೆ ಕಾರಣ. ಇದು ಮಳೆ ನೀರನ್ನು ಸುಲಭವಾಗಿ ಇಂಗಿಸುವ ವ್ಯವಸ್ಥೆಯಾಗಿದೆ. ವಿಶ್ವದಲ್ಲೇ ಇಂಥ ವ್ಯವಸ್ಥೆ ಹೊಂದಿರುವ ಏಕೈಕ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಯೂ ಇದೆ. ಜತೆಗೆ ಸೌರಶಕ್ತಿಯನ್ನು ಬಳಸಿಕೊಳ್ಳುವ ವಿಶ್ವದ ಏಕೈಕ ಸ್ಟೇಡಿಯಂ ಕೂಡ ಆಗಿದೆ. ಜರ್ಮನಿಯ ಫ್ರೀಬರ್ಗ್ ಫುಟ್​ಬಾಲ್ ಸ್ಟೇಡಿಯಂನಿಂದ ಸ್ಪೂರ್ತಿ ಪಡೆದು, ಚಿನ್ನಸ್ವಾಮಿ ಸ್ಟೇಡಿಯಂ ಮೇಲ್ಛಾವಣಿಯಲ್ಲಿ ಸೌರಶಕ್ತಿ ಬೋರ್ಡ್​ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ 2015ರಿಂದ ವಿದ್ಯುತ್ ಸ್ವಾವಲಂಬನೆ ಹೊಂದಿದೆ. ಜತೆಗೆ ಸಂಸ್ಕರಿಸಿದ ತ್ಯಾಜ್ಯನೀರು ಮರುಬಳಕೆಯಿಂದ ಚಿನ್ನಸ್ವಾಮಿ ಸ್ಟೇಡಿಯಂ, ಒಂದು ಹನಿ ನೀರನ್ನೂ ವ್ಯರ್ಥಗೊಳಿಸುವುದಿಲ್ಲ.

ಚಿನ್ನಸ್ವಾಮಿ ಸ್ಟೇಡಿಯಂಗೆ ಗ್ರಹಣ

50 ವರ್ಷಗಳ ಸಂಭ್ರಮ. ಕಳೆದ ವರ್ಷ ಸ್ಟೇಡಿಯಂ 50 ವರ್ಷಗಳ ಸಂಭ್ರಮವನ್ನೂ ಆಚರಿಸಿತ್ತು. ಇದೇ ವೇಳೆ ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿಗಳಿಗೆ ರಾಜ್ಯದ ದಿಗ್ಗಜರಾದ ಜಿಆರ್ ವಿಶ್ವನಾಥ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮುಂತಾದವರ ಹೆಸರುಗಳನ್ನು ಇಡಲಾಗಿತ್ತು.

ವಿಶ್ವ ಸುಂದರಿ ಸ್ಪರ್ಧೆ

ಚಿನ್ನಸ್ವಾಮಿ ಸ್ಟೇಡಿಯಂ ಕೇವಲ ಕ್ರಿಕೆಟ್​ಗೆ ಸೀಮಿತವಲ್ಲ. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯೂ ಇಲ್ಲೇ ನಡೆದಿತ್ತು. ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಇದರ ಸಂಘಟಕರಾಗಿದ್ದರು. ಅದಕ್ಕೆ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೆಲ ಫುಟ್​ಬಾಲ್ ಪಂದ್ಯಗಳೂ ನಡೆದಿದ್ದವು.

ಎನ್​ಸಿಎಗೂ ಆಶ್ರಯ ನೀಡಿತ್ತು

ಬೆಂಗಳೂರು ಹೊರವಲಯದಲ್ಲಿ ಈಗ ಬಿಸಿಸಿಐ ತನ್ನ ಶ್ರೇಷ್ಠತಾ ಕೇಂದ್ರವನ್ನು ನಿರ್ವಿುಸಿದೆ. ಅದಕ್ಕೆ ಮುನ್ನ 2000ದಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್​ಸಿಎ) ಚಿನ್ನಸ್ವಾಮಿ ಸ್ಟೇಡಿಯಂ ಆವರಣವೇ ಆಶ್ರಯ ನೀಡಿತ್ತು.

ಸ್ಮರಣೀಯ ಪಂದ್ಯಗಳು

ಭಾರತೀಯ ಕ್ರಿಕೆಟ್ ಇತಿಹಾಸದ ಕೆಲ ಐತಿಹಾಸಿಕ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆದಿವೆ. 1996ರ ಏಕದಿನ ವಿಶ್ವಕಪ್ ಕ್ವಾರ್ಟರ್​ಫೈನಲ್​ನಲ್ಲಿ ಪಾಕಿಸ್ತಾನದ ಅಮೀರ್ ಸೋಹೈಲ್ ಬೌಂಡರಿ ಬಾರಿಸಿದ ಮರು ಎಸೆತದಲ್ಲೇ ಕನ್ನಡಿಗ ವೆಂಕಟೇಶ್ ಪ್ರಸಾದ್ ಬೌಲ್ಡ್ ಮಾಡಿ ಪೆವಿಲಿಯನ್​ಗೆ ಕೈ ತೋರಿಸುವ ಮೂಲಕ ಸೇಡು ತೀರಿಸಿಕೊಂಡಿದ್ದು ಕೂಡ ಸ್ಮರಣೀಯ ಕ್ಷಣವೆನಿಸಿದೆ.

ಚಿನ್ನಸ್ವಾಮಿ ಹೆಸರೇಕೆ?

ಚಿನ್ನಸ್ವಾಮಿ ಸ್ಟೇಡಿಯಂ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಂಡ್ಯ ಮೂಲದ ವಕೀಲ ಮಂಗಲಂ ಚಿನ್ನಸ್ವಾಮಿ. ಕ್ರಿಕೆಟ್ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ವಿುಸಲು ಶ್ರಮಿಸಿದ್ದರು. ಹಲವು ಸಂಸ್ಥೆಗಳ ಕಾನೂನು ಸಲಹೆಗಾರ ಮತ್ತು ಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿದ್ದ ಅವರು 1977ರಿಂದ 1980ರ ನಡುವೆ ಬಿಸಿಸಿಐ ಅಧ್ಯಕ್ಷರೂ ಆಗಿದ್ದರು. ಎಂ.ಜಿ. ರೋಡ್​ನಂಥ ಉದ್ಯಾನನಗರಿಯ ಪ್ರಮುಖ ಭಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ವಿುಸಲು 1969ರಲ್ಲಿ ಕರ್ನಾಟಕ ಸರ್ಕಾರದಿಂದ ಜಾಗ ಪಡೆದುಕೊಳ್ಳುವಲ್ಲೂ ನಿರ್ಣಾಯಕ ಪಾತ್ರ ವಹಿಸಿದ್ದರು. ಆಗಿನ ಸರ್ಕಾರದಿಂದ 100 ವರ್ಷಗಳಿಗೆ ಈ ಜಾಗವನ್ನು ಭೋಗ್ಯಕ್ಕೆ ಪಡೆದುಕೊಳ್ಳಲಾಗಿತ್ತು. 1969ರ ಮೇ 18ರಂದು ಚಿನ್ನಸ್ವಾಮಿ ಅವರೇ ಸ್ಟೇಡಿಯಂ ನಿರ್ವಣಕ್ಕೆ ಅಡಿಗಲ್ಲು ಹಾಕಿದ್ದರು. ಹೀಗಾಗಿ ಚಿನ್ನಸ್ವಾಮಿ ಅವರಿಗೆ ಇಷ್ಟವಿಲ್ಲದಿದ್ದರೂ ಸ್ಟೇಡಿಯಂಗೆ ಅವರ ಹೆಸರು ನಾಮಕರಣ ಮಾಡಲಾಗಿತ್ತು.

25 ಟೆಸ್ಟ್ ಪಂದ್ಯಗಳು

ಬೆಂಗಳೂರಿನಲ್ಲಿ ಇದುವರೆಗೆ 25 ಟೆಸ್ಟ್ ಪಂದ್ಯಗಳು ನಡೆದಿವೆ. 2024ರ ಅಕ್ಟೋಬರ್​ನಲ್ಲಿ ಭಾರತ-ನ್ಯೂಜಿಲೆಂಡ್ ನಡುವೆ 25ನೇ ಟೆಸ್ಟ್ ನಡೆದಿತ್ತು. ಇದಲ್ಲದೆ 31 ಏಕದಿನ ಮತ್ತು 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳೂ ನಡೆದಿವೆ. ಜತೆಗೆ ನೂರಾರು ಐಪಿಎಲ್ ಪಂದ್ಯಗಳು, ಮಹಿಳೆಯರ ಅಂತಾರಾಷ್ಟ್ರೀಯ ಪಂದ್ಯಗಳೂ ನಡೆದಿವೆ. 1996, 2011 ಮತ್ತು 2023ರಲ್ಲಿ ಏಕದಿನ ವಿಶ್ವಕಪ್, 2016ರ ಟಿ20 ವಿಶ್ವಕಪ್ ಪಂದ್ಯಗಳಿಗೂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು.

ಹಲವು ಪ್ರಥಮಗಳ ತಾಣ...

  • 1974ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಅದು ವಿಂಡೀಸ್ ದಿಗ್ಗಜರಾದ ವಿವ್ ರಿಚರ್ಡ್ಸ್ ಮತ್ತು ಗಾರ್ಡನ್ ಗ್ರೀನಿಜ್​ಗೂ ಚೊಚ್ಚಲ ಟೆಸ್ಟ್ ಪಂದ್ಯವಾಗಿತ್ತು.
  • 1982ರಲ್ಲಿ ಭಾರತ-ಶ್ರೀಲಂಕಾ ತಂಡಗಳ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಏಕದಿನ ಪಂದ್ಯ ನಡೆದಿತ್ತು.
  • 2012ರ ಡಿಸೆಂಬರ್​ನಲ್ಲಿ ಭಾರತ-ಪಾಕಿಸ್ತಾನ ತಂಡಗಳ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಗೊಂಡಿತ್ತು.
  • 1996ರ ಏಕದಿನ ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಕ್ವಾರ್ಟರ್​ಫೈನಲ್ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆದಿತ್ತು ಮತ್ತು ಇದು ಇಲ್ಲಿ ನಡೆದ ಮೊದಲ ಅಹರ್ನಿಶಿ ಪಂದ್ಯವಾಗಿತ್ತು.
  • 2011ರ ಏಕದಿನ ವಿಶ್ವಕಪ್​ನಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆದ ಪಂದ್ಯ ಟೈ ಆಗಿತ್ತು. ಉಭಯ ತಂಡಗಳೂ ಆಗ 338 ರನ್ ಗಳಿಸಿದ್ದವು.
  • 2022ರ ಮಾರ್ಚ್​ನಲ್ಲಿ ಭಾರತ-ಶ್ರೀಲಂಕಾಗಳ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯ ನಡೆದಿತ್ತು.
  • 2024ರ ಜನವರಿಯಲ್ಲಿ ಭಾರತ-ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯ ಟೈ ಆಗಿತ್ತು. ಬಳಿಕ ಅವಳಿ ಸೂಪರ್ ಓವರ್ ನಡೆದಿತ್ತು. ಇದು ಮೊದಲ ಡಬಲ್ ಸೂಪರ್ ಓವರ್ ಪಂದ್ಯವೆನಿಸಿದೆ.
  • 2017ರಲ್ಲಿ ಟೆಸ್ಟ್ ಮಾನ್ಯತೆ ಪಡೆದ ಬಳಿಕ ಅಫ್ಘಾನಿ ಸ್ತಾನ ತಂಡ 2018ರ ಜೂನ್​ನಲ್ಲಿ ಇಲ್ಲೇ ಭಾರತ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯ ಆಡಿತ್ತು.

ದಾಖಲೆಗಳ ಧಮಾಕಾ

ಜಾಗತಿಕ, ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್ ಟೂರ್ನಿಯ ಹಲವಾರು ದಾಖಲೆಗಳಿಗೂ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಿದೆ. 1979ರಲ್ಲಿ ಭಾರತ ತಂಡದ 100ನೇ ಟೆಸ್ಟ್ ಪಂದ್ಯ ಇಲ್ಲೇ ನಡೆದಿತ್ತು. ಭಾರತ-ಪಾಕಿಸ್ತಾನ ನಡುವಿನ ಆ ಟೆಸ್ಟ್ ಡ್ರಾ ಕಂಡಿತ್ತು. 1988ರಲ್ಲಿ ನ್ಯೂಜಿಲೆಂಡ್ ವೇಗಿ ರಿಚರ್ಡ್ ಹ್ಯಾಡ್ಲಿ ಆಗಿನ ವಿಶ್ವದಾಖಲೆ 374ನೇ ಟೆಸ್ಟ್ ವಿಕೆಟ್ ಕಬಳಿಸಿದ್ದರು. 2013ರಲ್ಲಿ ಆಸೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮ 209 ರನ್ ಸಿಡಿಸಿ ತನ್ನ 2ನೇ ದ್ವಿಶತಕ ಸಂಭ್ರಮ ಕಂಡಿದ್ದರು. 2017ರ ಟೆಸ್ಟ್​ನಲ್ಲಿ ಆಸೀಸ್ ಸ್ಪಿನ್ನರ್ ನಾಥನ್ ಲ್ಯಾನ್ 50 ರನ್​ಗೆ 8 ವಿಕೆಟ್ ಕಬಳಿಸಿದ್ದು ಶ್ರೇಷ್ಠ ಬೌಲಿಂಗ್ ನಿರ್ವಹಣೆ ಎನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net