

ನ್ಯೂಯಾರ್ಕ್: ದಾಖಲೆಯ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಸೆರ್ಬಿಯಾದ ತಾರೆ ನೊವಾಕ್ ಜೋಕೊವಿಕ್ ಮತ್ತು ಹಾಲಿ ಚಾಂಪಿಯನ್ ಕಾಲೋರ್ಸ್ ಅಲ್ಕರಾಜ್ಗೆ ಆಘಾತ ನೀಡಿರುವ ರಷ್ಯಾದ ಆಟಗಾರ ಡೆನಿಲ್ ಮೆಡ್ವೆಡೇವ್ ವರ್ಷದ ಕೊನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಯುಎಸ್ ಓಪನ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಗೇರಿದ್ದಾರೆ. 2021ರ ಫೈನಲಿಸ್ಟ್ಗಳ ಮರುಮುಖಾಮುಖಿ ಇದಾಗಿದೆ.
ಎರಡನೇ ಶ್ರೇಯಾಂಕಿತ ಜೋಕೊವಿಕ್ ಶುಕ್ರವಾರ ರಾತ್ರಿ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಅಮೆರಿಕದ ಯುವತಾರೆ ಬೆನ್ ಶೆಲ್ಟನ್ ವಿರುದ್ಧ 6-3, 6-2, 7-6 (7-4) ನೇರಸೆಟ್ಗಳಿಂದ ಗೆಲುವು ದಾಖಲಿಸಿದರು. ಎರಡು ಗಂಟೆ, 41 ನಿಮಿಷಗಳ ಹೋರಾಟದಲ್ಲಿ ಜೋಕೊವಿಕ್ ಜಯ ಒಲಿಸಿಕೊಂಡರು. ಈ ಮೂಲಕ ಯುಎಸ್ ಓಪನ್ನಲ್ಲಿ 10ನೇ ಬಾರಿ ಫೈನಲ್ಗೇರಿದ ಸಾಧನೆ ಮಾಡಿದರು.
ಕರೊನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ಕಳೆದ ವರ್ಷದ ಟೂರ್ನಿ ತಪ್ಪಿಸಿಕೊಂಡಿದ್ದ 36 ವರ್ಷದ ಜೋಕೋ, ಈಗ 4ನೇ ಬಾರಿ ಇಲ್ಲಿ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದ್ದಾರೆ. ಇದಲ್ಲದೆ 2021ರ ಫೈನಲ್ ಸೋಲಿಗೆ ಮೆಡ್ವೆಡೇವ್ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶವೂ ಅವರ ಮುಂದಿದೆ. ಫೈನಲ್ ಫಲಿತಾಂಶ ಏನೇ ಬಂದರೂ ಜೋಕೋ ಮುಂದಿನ ವಾರ ಮರಳಿ ವಿಶ್ವ ನಂ. 1 ಪಟ್ಟಕ್ಕೇರಲಿದ್ದಾರೆ. ಇದು ಅವರು ಮೊದಲ ಸುತ್ತು ದಾಟಿದಾಗಲೇ ಖಚಿತಗೊಂಡಿತ್ತು. ನೊವಾಕ್ ಜೋಕೊವಿಕ್ 3ನೇ ಬಾರಿಗೆ ವರ್ಷದ ಎಲ್ಲ 4 ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಫೈನಲ್ಗೇರಿ ರೋಜರ್ ಫೆಡರರ್ (2006, 2007, 2009) ಸಾಧನೆ ಮಾಡಿದ್ದರು. ಈ ಮುನ್ನ 2015 ಮತ್ತು 2021ರಲ್ಲೂ ಇದನ್ನು ಸಾಧಿಸಿದ್ದರು.
ಯುಎಸ್ ಓಪನ್ನಲ್ಲಿ 10ನೇ ಬಾರಿಗೆ ಫೈನಲ್ಗೇರಿದ ಜೋಕೊವಿಕ್, 2 ಗ್ರಾಂಡ್ ಸ್ಲಾಂಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿದರು. ಆಸ್ಟ್ರೆಲಿಯನ್ ಓಪನ್ನಲ್ಲೂ ಅವರು 10 ಬಾರಿ ಫೈನಲ್ಗೇರಿದ್ದಾರೆ. ಜೋಕೊವಿಕ್ ಯುಎಸ್ ಓಪನ್ನಲ್ಲಿ 100 ಪಂದ್ಯ ಆಡಿದ 3ನೇ ಆಟಗಾರ ಎನಿಸಿದರು. ಜಿಮ್ಮಿ ಕಾನರ್ಸ್ (115) ಮತ್ತು ರೋಜರ್ ಫೆಡರರ್ (103) ಮೊದಲಿಬ್ಬರು.
ಅಲ್ಕರಾಜ್ಗೆ ಮೆಡ್ವೆಡೇವ್ ಶಾಕ್
ಸತತ 2ನೇ ಬಾರಿ ಯುಎಸ್ ಓಪನ್ ಮತ್ತು ವರ್ಷದ ಸತತ 2ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದ್ದ ಅಗ್ರ ಶ್ರೇಯಾಂಕಿತ ಅಲ್ಕರಾಜ್, 3ನೇ ಶ್ರೇಯಾಂಕಿತ ಮೆಡ್ವೆಡೇವ್ ಎದುರು 6-7 (3-7), 1-6, 6-3, 3-6ರಿಂದ ಪರಾಭವಗೊಂಡರು. 3 ಗಂಟೆ 19 ನಿಮಿಷಗಳ ಹೋರಾಟದಲ್ಲಿ ಸ್ಪೇನ್ನ 20 ವರ್ಷದ ಆಟಗಾರ ಅಲ್ಕರಾಜ್ ಶರಣಾದರು. 2021ರಲ್ಲಿ ಯುಎಸ್ ಓಪನ್ನಲ್ಲೇ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಂಡಿದ್ದ 27 ವರ್ಷದ ಮೆಡ್ವೆಡೇವ್ ಇದೀಗ ಅದನ್ನು 2ಕ್ಕೆ ವಿಸ್ತರಿಸುವ ಹಂಬಲದಲ್ಲಿದ್ದಾರೆ. 5ನೇ ಬಾರಿಗೆ ಗ್ರಾಂಡ್ ಸ್ಲಾಂ ಟೂರ್ನಿಯ ಫೈನಲ್ಗೇರಿದ ಮೆಡ್ವೆಡೇವ್, ಗರಿಷ್ಠ ಬಾರಿ ಗ್ರಾಂಡ್ ಸ್ಲಾಂ ಫೈನಲ್ಗೇರಿದ ರಷ್ಯಾ ಆಟಗಾರ ಎನಿಸಿದ್ದ ಮರಾಟ್ ಸಫಿನ್ (4) ದಾಖಲೆ ಮುರಿದರು.