

ಲಂಡನ್: ಒಂದು ತಿಂಗಳ ಹಿಂದಷ್ಟೇ ಬಲಗಾಲಿನ ಮಂಡಿ ಶಸಚಿಕಿತ್ಸೆಗೆ ಒಳಗಾಗಿದ್ದ 24 ಗ್ರಾಂಡ್ ಸ್ಲಾಂ ಒಡೆಯ, ಸೆರ್ಬಿಯಾದ ನೊವಾಕ್ ಜೋಕೊವಿಕ್, ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸತತ 7ನೇ ವರ್ಷವೂ ಕ್ವಾರ್ಟರ್‌ಫೈನಲ್‌ಗೇರಿದ್ದಾರೆ. ಇದರೊಂದಿಗೆ 8ನೇ ಬಾರಿ ಹಸಿರು ಹುಲ್ಲಿನ ಅಂಕಣದಲ್ಲಿ ಪ್ರಶಸ್ತಿ ಜಯಿಸುವತ್ತ ದಾಪುಗಾಲಿಟ್ಟಿದ್ದಾರೆ.
13ನೇ ಶ್ರೇಯಾಂಕಿತ ಟೇಲರ್ ಫ್ರಿಟ್ಜ್, ಬಾರ್ಬರೊ ಕ್ರೆಜಿಕೋವಾ ಸಹ ಉಪಾಂತ್ಯಕ್ಕೆ ಲಗ್ಗೆಯಿಟ್ಟಿದ್ದಾರೆ. ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್, 15ನೇ ಶ್ರೇಯಾಂಕಿತ ಹೋಲ್ಗರ್ ರೂನ್, ಡೆನಿಲ್ ಕಾಲಿನ್ಸ್ ನಿರಾಸೆ ಅನುಭವಿಸಿದ್ದಾರೆ. ಸೋಮವಾರ ತಡರಾತ್ರಿ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ಜೋಕೊವಿಕ್ ಹಾಲಿ ಟೂರ್ನಿಯಲ್ಲಿ ಇದುವರೆಗಿನ ಅತ್ಯುತ್ತಮ ಆಟ ಪ್ರದರ್ಶಿಸಿದರು. 7 ಬಾರಿ ಚಾಂಪಿಯನ್ ಜೋಕೋ 6-3,6-4, 6-2 ನೇರ ಸೆಟ್‌ಗಳಿಂದ ಡೆನ್ಮಾರ್ಕ್‌ನ ರೂನ್ ಎದುರು 2 ಗಂಟೆ 3 ನಿಮಿಷಗಳ ಹೋರಾಟದಲ್ಲಿ ಗೆಲುವು ದಾಖಲಿಸಿದರು. 15ನೇ ಬಾರಿಗೆ ಹಸಿರು ಹುಲ್ಲಿನ ಅಂಕಣದಲ್ಲಿ ಕ್ವಾರ್ಟರ್‌ಫೈನಲ್ ಆಡಿರುವ ಜೋಕೊವಿಕ್,ವಿಂಬಲ್ಡನ್‌ನಲ್ಲಿ ಗರಿಷ್ಠ ಬಾರಿ ಎಂಟರಘಟ್ಟದ ಪಂದ್ಯವನ್ನಾಡಿದ 2ನೇ ಆಟಗಾರ ಎನಿಸಲಿದ್ದಾರೆ. ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ (18) ಅಗ್ರಸ್ಥಾನದಲ್ಲಿದ್ದಾರೆ. 2ನೇ ಶ್ರೇಯಾಂಕಿತ ಜೋಕೋಗೆ ಇದು 60ನೇಗ್ರಾಂಡ್ ಸ್ಲಾಂ ಎಂಟರಘಟ್ಟದ ಪಂದ್ಯವಾಗಿದೆ. ಹಾಲಿ ರನ್ನರ್ ಅಪ್ ಜೋಕೋ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೊರ್ ಸವಾಲು ಎದುರಿಸಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್ ಆರಂಭಿಕ 2 ಸೆಟ್‌ನಲ್ಲಿ ಮುನ್ನಡೆ ಸಾಧಿಸಿರೂ ಆಘಾತ ಕಂಡರು. 3 ಗಂಟೆ 29 ನಿಮಿಷ ನಡೆದ ಐದು ಸೆಟ್‌ಗಳ ಸೆಣಸಾಟದಲ್ಲಿ ಜ್ವೆರೇವ್ 6-4, 7-6, 4-6, 6-7, 3- ರಿಂದ ಅಮೆರಿಕದ ಟೇಲರ್ ಫ್ರಿಟ್ಜ್ ಎದುರು ಪರಾಭವಗೊಂಡರು.
60: ನೊವಾಕ್ ಜೋಕೊವಿಕ್ ಒಟ್ಟಾರೆ ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ 60ನೇ ಬಾರಿ ಕ್ವಾರ್ಟರ್‌ಫೈನಲ್‌ಗೇರಿದ್ದಾರೆ. ಫ್ರೆಂಚ್ ಓಪನ್ (18), ವಿಂಬಲ್ಡನ್ (15), ಆಸ್ಟ್ರೇಯನ್ ಓಪನ್ (14) ಹಾಗೂ ಯುಎಸ್ ಓಪನ್ (13). ಫೆಡರರ್ (57), ನಡಾಲ್ (47) ನಂತರದ ಸ್ಥಾನದಲ್ಲಿದ್ದಾರೆ.