

ಲಂಡನ್: ಏಳು ಬಾರಿಯ ಚಾಂಪಿಯನ್ ಸೆರ್ಬಿಯಾದ ನೊವಾಕ್ ಜೋಕೊವಿಕ್, ಮಾಜಿ ಚಾಂಪಿಯನ್ ಎಲೆನಾ ರೈಬಕಿನಾ, ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕಿತ ಜೋಕೊವಿಕ್ ಕ್ವಾರ್ಟರ್‌ಫೈನಲ್‌ನಲ್ಲಿ ವಾಕ್ ಓವರ್ ಪಡೆದಿದ್ದಾರೆ. ಬುಧವಾರ ಪಂದ್ಯ ಆರಂಭಕ್ಕೂ ಮುನ್ನ ಎದುರಾಳಿ 9ನೇ ಶ್ರೇಯಾಂಕಿತ ಅಲೆಕ್ಸ್ ಡಿ ಮಿನೊರ್ ಸೊಂಟ ನೋವಿನ ಸಮಸ್ಯೆಯಿಂದಾಗಿ ಕಣದಿಂದ ಹಿಂದೆಸರಿದರು. ಇದರೊಂದಿಗೆ ಹಾಲಿ ರನ್ನರ್ ಅಪ್ ಜೋಕೋ 13ನೇ ಬಾರಿ ಟೂರ್ನಿಯಲ್ಲಿ 4ರ ಘಟ್ಟಕ್ಕೇರಿದರು. ಜತೆಗೆ ಗರಿಷ್ಠ ಬಾರಿ 4ರ ಘಟ್ಟಕ್ಕೇರಿದ ರೋಜರ್ ಫೆಡರರ್ ದಾಖಲೆ ಸರಿಗಟ್ಟಿದರು. ಸೆಮಿಪೈನಲ್‌ನಲ್ಲಿ ಟೇಲರ್ ಫ್ರಿಟ್ಜ್ ಅಥವಾ ಲೊರೆಂಜೊ ಮುಸೆಟ್ಟಿ ವಿರುದ್ಧ ಶುಕ್ರವಾರ ಕಾದಾಟ ನಡೆಸಲಿದ್ದಾರೆ.
ರೈಬಕಿನಾಗೆ 2ನೇ ಸೆಮೀಸ್: 2022ರ ಚಾಂಪಿಯನ್ ಕಜಾಕಿಸ್ತಾನದ ರೈಬಕಿನಾ ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಬಾರಿ ಉಪಾಂತ್ಯಕ್ಕೇರಿದ್ದಾರೆ. ಟೂರ್ನಿಯಲ್ಲಿ ಉಳಿದಿರುವ ಪ್ರಮುಖ ಶ್ರೇಯಾಂಕಿತೆಯಾಗಿರುವ 25 ವರ್ಷದ ರೈಬಕಿನಾ 6-3, 6-2 ರಿಂದ ಯೂಕ್ರೇನ್‌ನ ಎಲಿನಾ ಸ್ವಿಟೋಲಿನಾ ಎದುರು ಸಲಭ ಗೆಲುವು ದಕ್ಕಿಸಿಕೊಂಡರು. ಇದು ವೃತ್ತಿಜೀವನದ 3ನೇ ಗ್ರಾಂಡ್ ಸ್ಲಾಂ ಸೆಮೀಸ್ ಎನಿಸಿದೆ. ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ 31ನೇ ಶ್ರೇಯಾಂಕಿತೆ ಬಾರ್ಬೊರಾ ಕ್ರೆಜಿಕೋವಾ 6-4, 7-6 (4) ರಿಂದ 13ನೇ ಶ್ರೇಯಾಂಕಿತೆ ಜೆಲೆನಾ ಒಸ್ತಾಪೆಂಕೊ ಅವರನ್ನು ಮಣಿಸಿ ಚೊಚ್ಚಲ ಬಾರಿ ವಿಂಬಲ್ಡನ್ ಸೆಮೀಸ್‌ಗೇರಿದ ಸಾಧನೆ ಮಾಡಿದರು. ಕ್ರೆಜಿಕೋವಾ 2021ರ ಫ್ರೆಂಚ್ ಓಪನ್ ಚಾಂಪಿಯನ್ ಎನಿಸಿದರೆ, ಒಸ್ತಾಪೆಂಕೊ 2017ರಲ್ಲಿ ಪ್ರಶಸ್ತಿ ಜಯಿಸಿದ್ದರು. ಮಹಿಳಾ ಸೆಮಿಫೈನಲ್‌ನಲ್ಲಿ ರೈಬಕಿನಾ-ಕ್ರೆಜಿಕೋವಾ ಹಾಗೂ ಡೊನ್ನಾ ವೆಕಿಕ್- ಜಾಸ್ಮಿನ್ ಪಾವೊಲಿನಿ ಪರಸ್ಪರ ಎದುರಾಗಲಿದ್ದಾರೆ.