

ಕೋಲ್ಕತ: ಭಾರತೀಯ ಕ್ರಿಕೆಟ್ ತಂಡದ ತರಬೇತಿ ಶಿಬಿರ ಆಗಸ್ಟ್ಗೆ ಮುನ್ನ ಆರಂಭಗೊಳ್ಳುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಈ ಮುನ್ನ ಜುಲೈ 3ನೇ ವಾರದಲ್ಲಿ ಶಿಬಿರ ಆಯೋಜನೆಗೊಳ್ಳುವ ನಿರೀಕ್ಷೆ ವ್ಯಕ್ತವಾಗಿತ್ತು.
ಚೇತೇಶ್ವರ ಪೂಜಾರ, ರವೀಂದ್ರ ಜಡೇಜಾ, ಮೊಹಮದ್ ಶಮಿ ಮತ್ತು ರೋಹಿತ್ ಶರ್ಮ ಸಹಿತ ಕೆಲ ಕ್ರಿಕೆಟಿಗರು ಈಗಾಗಲೆ ಹೊರಾಂಗಣ ಅಭ್ಯಾಸ ಆರಂಭಿಸಿದ್ದಾರೆ. ಉಳಿದಂತೆ ಹೆಚ್ಚಿನ ಕ್ರಿಕೆಟಿಗರು ಲಾಕ್ಡೌನ್ ಸಮಯದಲ್ಲಿ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದು, ಫಿಟ್ನೆಸ್ಗಾಗಿ ಸ್ವಂತ ಜಿಮ್ ಮತ್ತು ವ್ಯಾಯಾಮಗಳ ಮೊರೆ ಹೋಗಿದ್ದಾರೆ. ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ವೇಳೆ ದೇಶದಲ್ಲಿ ಕ್ರಿಕೆಟ್ ಚಟುವಟಿಕೆ ಸ್ಥಗಿತಗೊಂಡಿತ್ತು. ಬಳಿಕ ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಯಾಗಿದ್ದರೆ, ಜೂನ್ನಿಂದ ಆಗಸ್ಟ್ವರೆಗಿನ ಶ್ರೀಲಂಕಾ ಮತ್ತು ಜಿಂಬಾಬ್ವೆ ಪ್ರವಾಸಗಳು ರದ್ದುಗೊಂಡಿದ್ದವು. ಆಗಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಯೂ ನಿಗದಿಯಂತೆ ನಡೆಯುವುದು ಅನುಮಾನವೆನಿಸಿದೆ.