ಭಜ್ಜಿ​, ಅಶ್ವಿನ್​​ ಅಲ್ಲವೇ ಅಲ್ಲ... ರವಿಶಾಸ್ತ್ರಿ ಪ್ರಕಾರ ಟೀಮ್​ ಇಂಡಿಯಾದ ಬೆಸ್ಟ್​ ಸ್ಪಿನ್ನರ್ಸ್ ಇವರೇ​..! Team India best spinners

Team India best spinners
Published on

Team India best spinners : ಟೀಮ್​ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಸದ್ಯ ಆಸ್ಟ್ರೇಲಿಯಾದಲ್ಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಅವರು ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ನಡುವೆ ರವಿಶಾಸ್ತ್ರಿ ಅವರಿಗೆ ಪ್ರಶ್ನೆಯೊಂದು ಎದುರಾಗಿತ್ತು. ಭಾರತ ಕ್ರಿಕೆಟ್ ತಂಡದ ಮೂವರು ಸಾರ್ವಕಾಲಿಕ ಅತ್ಯುತ್ತಮ ಸ್ಪಿನ್ನರ್‌ಗಳ ಹೆಸರಿಸಿ ಎಂದು ಕೇಳಲಾಯಿತು. ಈ ಪ್ರಶ್ನೆಗೆ ರವಿಶಾಸ್ತ್ರಿ ಅವರು ಕುತೂಹಲಕಾರಿ ಉತ್ತರ ನೀಡಿದ್ದಾರೆ.

ಸದ್ಯ ರವಿಚಂದ್ರನ್ ಅಶ್ವಿನ್, ಟೀಮ್​ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು 103 ಟೆಸ್ಟ್‌ಗಳಲ್ಲಿ 417 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಐತಿಹಾಸಿಕ ಬೌಲರ್ ಎಂಬ ಹೆಸರು ಗಳಿಸಿದ್ದಾರೆ. ಅಶ್ವಿನ್ ಜತೆಗೆ ತಂಡದಲ್ಲಿ ಮುಂದುವರಿದಿರುವ ಮತ್ತೊಬ್ಬ ಸ್ಪಿನ್ನರ್​ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ 319 ವಿಕೆಟ್ (77 ಟೆಸ್ಟ್ ಪಂದ್ಯಗಳಲ್ಲಿ) ಕಬಳಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ.

ಆದರೆ, ರವಿಶಾಸ್ತ್ರಿ ಅವರು ಈ ಮೂವರಲ್ಲಿ ಯಾರ ಹೆಸರನ್ನೂ ಹೇಳಲಿಲ್ಲ. ಅವರ ದೃಷ್ಟಿಯಲ್ಲಿ ಬಿಷನ್ ಸಿಂಗ್ ಬೇಡಿ, ಎರ್ರಪಳ್ಳಿ ಪ್ರಸನ್ನ ಮತ್ತು ಅನಿಲ್ ಕುಂಬ್ಳೆ ಟೀಮ್​ ಇಂಡಿಯಾದ ಅತ್ಯುತ್ತಮ ಸ್ಪಿನ್ನರ್‌ಗಳು. ಫಾಕ್ಸ್ ಸ್ಪೋರ್ಟ್ಸ್ ಶೋನಲ್ಲಿ ಮಾತನಾಡಿದ ರವಿಶಾಸ್ತ್ರಿ, ಅನಿಲ್ ಕುಂಬ್ಳೆ ಅವರು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಪಿಚ್‌ಗಳಲ್ಲಿಯೂ ಅಪಾಯಕಾರಿ ಮತ್ತು ಆಕ್ರಮಣಕಾರಿ. ಟೆಸ್ಟ್‌ನಲ್ಲಿ 600ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸುವುದು ಸುಲಭದ ಮಾತಲ್ಲ ಎಂದರು.

ಎರ್ರಪಳ್ಳಿ ಪ್ರಸನ್ನ ಅವರು ವೃತ್ತಿಜೀವನದ ಅಂತ್ಯದ ಪರಿಸ್ಥಿತಿಯನ್ನು ನೋಡಿದರೆ, ಅವರು ತಂಡದ ವ್ಯವಸ್ಥಾಪಕರಾಗಿ ಆಸ್ಟ್ರೇಲಿಯಾಕ್ಕೆ ಬಂದರು. ನೆಟ್ಸ್​ನಲ್ಲೂ ಬೌಲಿಂಗ್ ಮಾಡಿದರು. ಅವರು ಚೆಂಡಿನೊಂದಿಗೆ ಅದ್ಭುತಗಳನ್ನು ಮಾಡಿದ್ದಾರೆ. ಚೆಂಡನ್ನು ಬಿಡುಗಡೆ ಮಾಡುವಾಗ ಯಾವಾಗ ಮತ್ತು ಏನು ಮಾಡಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ನನ್ನ ಪಟ್ಟಿಯಲ್ಲಿ ಇವರಿಬ್ಬರು ಎರಡು ಮತ್ತು 3ನೇ ಸ್ಥಾನದಲ್ಲಿದ್ದರೆ, ಬಿಷನ್ ಸಿಂಗ್ ಬೇಡಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಬೌಲಿಂಗ್ ಆಕ್ಷನ್ ಬಗ್ಗೆ ಎಷ್ಟು ಹೇಳಿದರೂ ಸಾಲದು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಅವರ ಪ್ರಕಾರ ಬಿಶನ್ ಬೇಡಿ, ಪ್ರಸನ್ನ ಮತ್ತು ಕುಂಬ್ಳೆ ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳು.

ಬಿಶನ್ ಬೇಡಿ ತಮ್ಮ ವೃತ್ತಿಜೀವನದಲ್ಲಿ 67 ಟೆಸ್ಟ್‌ಗಳಲ್ಲಿ 266 ವಿಕೆಟ್‌ಗಳನ್ನು ಪಡೆದರೆ, ಪ್ರಸನ್ನ 49 ಟೆಸ್ಟ್‌ಗಳಲ್ಲಿ 189 ವಿಕೆಟ್‌ಗಳನ್ನು ಪಡೆದರು. ಮತ್ತೊಂದೆಡೆ ಕುಂಬ್ಳೆ ಅವರು 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಟೆಸ್ಟ್‌ನಲ್ಲಿ ಭಾರತದ ಅಗ್ರ ವಿಕೆಟ್ ಟೇಕರ್ ಆಗಿ ಮುಂದುವರಿದಿದ್ದಾರೆ. ಅಶ್ವಿನ್​ ಅವರು 536 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net