

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಆದಾಯದ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಭಾರತದ ಪರ ಆಡುವುದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಕಿಂಗ್ ಕೊಹ್ಲಿ ಆಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಜಾಹೀರಾತಿನ ಆದಾಯದ ಮೂಲಕ ಭಾರಿ ಮೊತ್ತವನ್ನೇ ಬಾಚಿಕೊಳ್ಳುತ್ತಿದ್ದಾರೆ. ಉದ್ಯಮಕ್ಕೂ ಕಾಲಿಟ್ಟಿರುವ ಈ ಸ್ಟಾರ್ ಕ್ರಿಕೆಟಿಗ, ಬಟ್ಟೆ ಅಂಗಡಿಗಳ ಜತೆಗೆ ರೆಸ್ಟೋರೆಂಟ್ಗಳನ್ನೂ ನಡೆಸುತ್ತಾ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಇನ್ನು ಕೊಹ್ಲಿ ಜೊತೆಗೆ ಟೀಮ್ ಇಂಡಿಯಾದ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಕೂಡ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿದ್ದಾರೆ. ಸಾಕಷ್ಟು ಆಸ್ತಿ ಮತ್ತು ಆದಾಯ ಅವರ ಹೆಸರಲ್ಲಿದೆ. ಆದರೆ, ಕೊಹ್ಲಿ ಅವರು ಸಂಪತ್ತಿನ ವಿಷಯದಲ್ಲಿ ಎಲ್ಲರಿಗಿಂತ ಎತ್ತರದಲ್ಲಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ಇವರ್ಯಾರೂ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಲ್ಲ. ಭಾರತದ ಯುವ ಆಟಗಾರನೊಬ್ಬ ಆದಾಯದಲ್ಲಿ ಕೊಹ್ಲಿ, ಸಚಿನ್ ಮತ್ತು ಧೋನಿಯನ್ನೂ ಮೀರಿ ವಿಶ್ವದ ಶ್ರೀಮಂತ ಕ್ರಿಕೆಟಿಗರಾಗಿ ಮುಂದುವರಿದಿದ್ದಾರೆ. ಆತ ಯಾರು ಎಂಬುದನ್ನು ನಾವೀಗ ತಿಳಿಯೋಣ.
ಆರ್ಯಮನ್ ಬಿರ್ಲಾ ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿ ಮುಂದುವರಿದಿದ್ದಾರೆ. ಆರ್ಯಮನ್ ಅವರು ಕೊಹ್ಲಿ ಮತ್ತು ಧೋನಿಗಿಂತಲೂ ಹೆಚ್ಚು ಆದಾಯ ಹೊಂದಿರುವ ಆಟಗಾರ ಎಂದು ಹೇಳಬಹುದು. ಆರ್ಯಮನ್ ಬಿರ್ಲಾ ಅವರು ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಮಗ. ಮಂಗಲಂ ಬಿರ್ಲಾ ಅವರು ದೇಶದ ಅತ್ಯಂತ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರು. ಆರ್ಯಮನ್ ಅವರು ತಮ್ಮ ವ್ಯಾಪಾರ ವ್ಯವಹಾರಗಳನ್ನು ನೋಡಿಕೊಳ್ಳುತ್ತಲೇ ಕ್ರಿಕೆಟ್ನಲ್ಲೂ ಮಿಂಚಿದ್ದಾರೆ. 2017ರಲ್ಲಿ ಪಾದರ್ಪಣೆ ಮಾಡಿದ್ದ ಈ ಯುವ ಆಟಗಾರ ಮಧ್ಯಪ್ರದೇಶ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಆದರೆ ಎರಡು ವರ್ಷಗಳ ನಂತರ, ಅವರು ಆಟಕ್ಕೆ ವಿದಾಯ ಹೇಳಿದರು.
ಆಸ್ತಿ ವಿಚಾರಕ್ಕೆ ಬಂದರೆ ಆರ್ಯಮಾನ್ ಅವರ ನಿವ್ವಳ ಮೌಲ್ಯವು 70 ಸಾವಿರ ಕೋಟಿ ರೂಪಾಯಿ. ಹಾಗೆ ನೋಡಿದರೆ ಕೊಹ್ಲಿ ಆಸ್ತಿ 1,050 ಕೋಟಿ ರೂಪಾಯಿ. ಕೊಹ್ಲಿ, ಧೋನಿ ಹಾಗೂ ಸಚಿನ್... ಈ ಮೂವರ ಆಸ್ತಿಯನ್ನು ಒಟ್ಟಿಗೆ ಸೇರಿಸಿದರೂ ಆರ್ಯಮನ್‌ನ ಸಂಪತ್ತಿನ ಹತ್ತಿರವೂ ಹೋಗುವುದಕ್ಕೆ ಸಾಧ್ಯವಿಲ್ಲ.
ಅಂದಹಾಗೆ ಆರ್ಯಮನ್ ಬಿರ್ಲಾ ತಮ್ಮ 22 ನೇ ವಯಸ್ಸಿನಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು. ಮಾನಸಿಕ ಆರೋಗ್ಯ ಸಮಸ್ಯೆಗಳಿಂದಾಗಿ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರಥಮ ದರ್ಜೆ ಪಂದ್ಯಗಳಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 414 ರನ್ ಗಳಿಸಿದರು. ದೇಶದಲ್ಲಿ ಮಾತ್ರವಲ್ಲ ವಿಶ್ವದ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡಿರುವ ಆರ್ಯಮನ್, ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ವ್ಯಾಪಾರದ ಕಡೆ ಗಮನ ಹರಿಸಿದರು. ಅವರು 70,000 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಮತ್ತು ದುಬಾರಿ ಕಾರುಗಳು ಹಾಗೂ ವಾಚ್‌ಗಳನ್ನು ಹೊಂದಿದ್ದಾರೆ.
ಇದೀಗ ಈ ವಿಚಾರ ತಿಳಿದ ನೆಟ್ಟಿಗರು ಇಷ್ಟು ದಿನ ಕೊಹ್ಲಿ ಮತ್ತು ಧೋನಿ ಶ್ರೀಮಂತ ಕ್ರಿಕೆಟಿಗರು ಎಂದು ಭಾವಿಸಿದ್ದೆವು, ಆದರೆ, ಇದನ್ನು ಕೇಳಿ ಅಚ್ಚರಿಗೊಂಡಿದ್ದೇವೆ. ಬಿಜಿನೆಸ್ ಹಿನ್ನಲೆ ಇರುವ ಕಾರಣ ಆ ರೇಂಜ್ಗೆ ಬೆಳೆದಿದ್ದಾರೆ. ಹಣ ಮಾಡಿರಬಹುದು ಆದರೆ, ಸಾಧನೆ ವಿಚಾರದಲ್ಲಿ ಸಚಿನ್, ಧೋನಿ ಮತ್ತು ಕೊಹ್ಲಿಯನ್ನು ಮೀರಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)