

All Out For 2 Runs : ಕ್ರಿಕೆಟ್ನಲ್ಲಿ ನಾವು ಇಲ್ಲಿಯವರೆಗೆ ಎಂಥೆಂತಾ ದಾಖಲೆಗಳನ್ನು ನೋಡಿದ್ದೇವೆ. ಆದರೆ, ನಾವು ಈ ರೀತಿಯದ್ದನ್ನು ನೋಡಿರುವುದಕ್ಕೆ ಸಾಧ್ಯಾನೇ ಇಲ್ಲ. ಇದೇ ಮೊದಲೆನ್ನಬಹುದು. ಗಲ್ಲಿ ಕ್ರಿಕೆಟ್ನಲ್ಲೂ ಇಂತಹ ದಾಖಲೆಗಳಿಲ್ಲ ಎನ್ನಬಹುದು. ಒಂದು ತಂಡವು ಬರೋಬ್ಬರಿ 426 ರನ್ ಗಳಿಸಿದರೆ, ಗುರಿಯನ್ನು ಬೆನ್ನಟ್ಟಿದ ತಂಡ ಅಕ್ಷರಶಃ ಎರಡು ರನ್ಗಳಿಗೆ ಸರ್ವಪತನ ಕಂಡಿತು. ಹೌದು, ಇದು ನಿಜ. ಈ 2 ರನ್ಗಳಲ್ಲಿ ಒಂದು ವೈಡ್ ರೂಪದಲ್ಲಿ ಬಂದಿರುವುದು ಅಚ್ಚರಿಯ ಸಂಗತಿ.
ಇಂಗ್ಲೆಂಡ್ನ ಮಿಡಲ್ಸೆಕ್ಸ್ ಕೌಂಟಿ ಲೀಗ್ನಲ್ಲಿ ಈ ವಿಚಿತ್ರ ಹಾಗೂ ಅಪರೂಪದ ಪ್ರಸಂಗ ಜರುಗಿದೆ. ಪಂದ್ಯವು ನಾರ್ತ್ ಲಂಡನ್ ಸಿಸಿ 3ನೇ ಇಲೆವೆನ್ ಮತ್ತು ರಿಚ್ಮಂಡ್ ಸಿಸಿ ಮಿಡ್ಡಿಎಕ್ಸ್ 4ನೇ ಇಲೆವೆನ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ, ರಿಚ್ಮಂಡ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ, ನಾರ್ತ್ ಲಂಡನ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಡೇನಿಯಲ್ ಸಿಮನ್ಸ್ (140) ಶತಕದ ನೆರವಿನಿಂದ 45 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 426 ರನ್ ಗಳಿಸಿತು.
427 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಿಚ್ಮಂಡ್ ತಂಡ 5.4 ಓವರ್ಗಳಲ್ಲಿ ಕೇವಲ 2 ರನ್ಗಳಿಗೆ ಆಲೌಟ್ ಆಯಿತು. ಈ ರನ್ಗಳಲ್ಲಿ ಒಂದು ಹೆಚ್ಚುವರಿ ರನ್ ರೂಪದಲ್ಲಿ ಬಂದಿತು. 11 ಬ್ಯಾಟ್ಸ್ಮನ್ಗಳು ಸೇರಿ ಕೇವಲ ಒಂದು ರನ್ ಗಳಿಸಿದರು. ಆ ರನ್ ಕೂಡ ಟಾಮ್ ಪೆಟ್ರಿಡ್ಸ್ ಎಂಬುವರು ಗಳಿಸಿದರು. ಒಂಬತ್ತು ಬ್ಯಾಟ್ಸ್ಮನ್ಗಳು ಡಕ್ ಔಟ್ ಆದರು. ನಾರ್ತ್ ಲಂಡನ್ ಪರ ಮ್ಯಾಥ್ಯೂ ರಾನ್ಸನ್ 5 ವಿಕೆಟ್ಗಳನ್ನು ಮತ್ತು ಥಾಮಸ್ ಪ್ಯಾಟನ್ ಮೂರು ವಿಕೆಟ್ಗಳನ್ನು ಪಡೆದರು. ಇದರೊಂದಿಗೆ, ನಾರ್ತ್ ಲಂಡನ್ 424 ರನ್ಗಳ ಬೃಹತ್ ಅಂತರದಿಂದ ಗೆದ್ದಿತು.
ಈ ಪಂದ್ಯದ ಸ್ಕೋರ್ಕಾರ್ಡ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಲ್ಲಿ ಕ್ರಿಕೆಟ್ ತಂಡ ನಿಮಗಿಂತ ಚೆನ್ನಾಗಿ ಆಡುತ್ತದೆ ಎಂದು ನೆಟ್ಟಿಗರು ಬಗೆಬಗೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಈ ಪಂದ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)