

ಬೆಂಗಳೂರು: ಏಕದಿನ ಕ್ರಿಕೆಟ್ ವಿಶ್ವಕಪ್ಗೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಎಲ್ಲ ತಂಡಗಳು ಟಿ20, ಟೆಸ್ಟ್ ಕ್ರಿಕೆಟ್ಗಳನ್ನು ಮರೆತುಬಿಟ್ಟಿವೆ. ಇನ್ನು ಎರಡೂವರೆ ತಿಂಗಳು ಬರೀ ಏಕದಿನ ಕ್ರಿಕೆಟ್ ಜ್ವರ. ವಿಶ್ವಕಪ್ಗೆ ಪೂರ್ವಸಿದ್ಧತೆಯಾಗಿ ಈಗ ಏಷ್ಯಾಕಪ್, ಇಂಗ್ಲೆಂಡ್-ನ್ಯೂಜಿಲೆಂಡ್ ನಡುವೆ 4 ಏಕದಿನ ಪಂದ್ಯಗಳ ಸರಣಿ, ದಕ್ಷಿಣ ಆಫ್ರಿಕಾ-ಆಸ್ಟ್ರೆಲಿಯಾ ನಡುವೆ 5 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ.
ನಂತರ ಸೆ.20ರಿಂದ ಇಂಗ್ಲೆಂಡ್-ಐರ್ಲೆಂಡ್ ನಡುವೆ 3 ಪಂದ್ಯಗಳ ಏಕದಿನ ಸರಣಿ, ಸೆ.21ರಿಂದ ಬಾಂಗ್ಲಾ-ನ್ಯೂಜಿಲೆಂಡ್ ನಡುವೆ 3 ಪಂದ್ಯಗಳ ಏಕದಿನ ಸರಣಿ, ಸೆ. 22ರಿಂದ ಭಾರತ-ಆಸೀಸ್ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಂತರ ವಿಶ್ವಕಪ್ಗೆ ಮುನ್ನ 10 ಅಭ್ಯಾಸ ಪಂದ್ಯಗಳು ನಡೆಯಲಿದ್ದರೂ, ಇವುಗಳಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ಮಾನ್ಯತೆ ಇರುವುದಿಲ್ಲ. ಯಾಕೆಂದರೆ ಇದರಲ್ಲಿ ಎಲ್ಲ 15 ಆಟಗಾರರನ್ನು ಆಡಿಸಬಹುದು. ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ವಿಶ್ವಕಪ್ನಲ್ಲಿ 48 ಏಕದಿನ ಪಂದ್ಯಗಳು ನಡೆಯಲಿವೆ.
ಮುಂದಿನ ಟೆಸ್ಟ್ ಪಂದ್ಯವಿನ್ನು ನವೆಂಬರ್ 28ರಿಂದ ಬಾಂಗ್ಲಾ-ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಮುಂದಿನ ಟಿ20 ಪಂದ್ಯ, ವಿಶ್ವಕಪ್ ಮುಗಿದ 4 ದಿನಗಳ ಬಳಿಕ ನವೆಂಬರ್ 23ರಂದು ಭಾರತ-ಆಸೀಸ್ ನಡುವೆ ವಿಶಾಖಪಟ್ಟಣದಲ್ಲಿ ನಡೆಯಲಿದೆ.