

2014ರ ಟಿ20 ವಿಶ್ವಕಪ್ ಫೈನಲ್, 2015ರ ವಿಶ್ವಕಪ್ ಸೆಮಿಫೈನಲ್, 2016ರ 19 ವಯೋಮಿತಿ ಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2017ರ ಮಹಿಳಾ ವಿಶ್ವಕಪ್ ಫೈನಲ್, 2018ರ ಮಹಿಳೆಯರ ಟಿ20 ವಿಶ್ವಕಪ್ ಸೆಮಿಫೈನಲ್, 2019ರ ವಿಶ್ವಕಪ್ ಸೆಮಿಫೈನಲ್, 2020ರ 19 ವಯೋಮಿತಿ ವಿಶ್ವಕಪ್ ಫೈನಲ್... ಈಗ 2020ರ ಮಹಿಳೆಯರ ಟಿ20 ವಿಶ್ವಕಪ್ ಫೈನಲ್.
ಈ ಮೇಲಿನ ಎಲ್ಲ ಪಂದ್ಯಗಳ ಫಲಿತಾಂಶ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಹೃದಯವನ್ನು ನುಚ್ಚುನೂರು ಮಾಡಿದಂತವು..!
ಕಳೆದ ಕೆಲವೊಂದು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ನ ಟ್ರೆಂಡ್ ಇದು. ಪುರುಷರ ತಂಡ, ಮಹಿಳಾ ತಂಡ ಅಥವಾ 19 ವಯೋಮಿತಿ ತಂಡ ಇದಾವುದೂ ಹೊರತಲ್ಲ. ಐಸಿಸಿ ಟೂರ್ನಿಯ ನಾಕೌಟ್ ಹಂತಗಳಲ್ಲಿ ಭಾರತ ತಂಡ ಸೋಲು ಕಾಣುವುದು ಇತ್ತೀಚಿನ ವರ್ಷಗಳಲ್ಲಿ ತೀರಾ ಸಾಮಾನ್ಯವಾಗಿಬಿಟ್ಟಿದೆ.
2014ರ ಟಿ20 ವಿಶ್ವಕಪ್ ಫೈನಲ್ನಿಂದ, 2020ರ ಮಹಿಳೆಯರ ಟಿ20 ವಿಶ್ವಕಪ್ ಫೈನಲ್ವರೆಗೆ ಐಸಿಸಿ ಟೂರ್ನಿಗಳಲ್ಲಿ ಆಡಿದ 10 ನಾಕೌಟ್ ಪಂದ್ಯಗಳಲ್ಲಿ ಭಾರತ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಬಳಿಕ ಭಾರತವೂ ಈಗ ಜಾಗತಿಕ ಕ್ರಿಕೆಟ್ನ ಮಹತ್ವದ ಪಂದ್ಯಗಳಲ್ಲಿ ಎಡವುವ ಚಾಳಿ ಬೆಳೆಸಿಕೊಂಡಂತಿದೆ.
2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ತಂಡ ಒಂದೇ ಒಂದು ಐಸಿಸಿ ಟೂರ್ನಿ ಗೆದ್ದಿಲ್ಲ. 2014ರ ಬಳಿಕ ಭಾರತದ ಏಕೈಕ ಐಸಿಸಿ ಟೂರ್ನಿಯ ಗೆಲುವು ದಾಖಲಾಗಿದ್ದು, 2018ರ 19 ವಯೋಮಿತಿ ವಿಶ್ವಕಪ್ನಲ್ಲಿ. ಪೃಥ್ವಿ ಷಾ ನೇತೃತ್ವದ ತಂಡ ಚಾಂಪಿಯನ್ ಪಟ್ಟವೇರಿತ್ತು. ಭಾರತ ತಂಡ ಐಸಿಸಿ ಟೂರ್ನಿಯ ಲೀಗ್ ಹಂತಗಳಲ್ಲಿ ಉತ್ತಮ ಆಟವಾಡಿ ಸೆಮಿಫೈನಲ್ ಅಥವಾ ಫೈನಲ್ ಹಂತಕ್ಕೇರುವುದು ಬಹುತೇಕ ಸಾಮಾನ್ಯವಾಗಿದೆ. ಆದರೆ, ನಾಕೌಟ್ ಹಂತ ದಾಟುವ ‘ಪಾಸ್ಕೋಡ್’ ಭಾರತಕ್ಕೆ ಸಿಕ್ಕಿಲ್ಲ.
ಪುರುಷರ ವಿಶ್ವಕಪ್ ಕಥೆ ಏನು?
ಐಸಿಸಿ ಟೂರ್ನಿಯಲ್ಲಿ ಭಾರತದ ವೈಫಲ್ಯ ಕಣ್ಣೆದುರಿನ ಸತ್ಯದಂತಿರುವಾಗ, ಈ ವರ್ಷಾಂತ್ಯದಲ್ಲಿ ಭಾರತ ತಂಡ ಪುರುಷರ ಟಿ20 ವಿಶ್ವಕಪ್ ಟೂರ್ನಿಯನ್ನು ಆಸ್ಟ್ರೇಲಿಯಾದಲ್ಲಿ ಆಡಲಿದೆ. ಕೊಹ್ಲಿ ನೇತೃತ್ವದ ತಂಡ ಈ ಕೆಟ್ಟ ಸರಪಳಿಯನ್ನು ತುಂಡು ಮಾಡಲಿದೆಯೇ ಎನ್ನುವ ಕುತೂಹಲ ಎಲ್ಲರಲ್ಲಿದೆ. ಮಾನಸಿಕವಾಗಿ ಭಾರತ ತಂಡ ಇನ್ನಷ್ಟು ಪಕ್ವವಾದರೆ ಮಾತ್ರವೇ ಇಂಥ ಟೂರ್ನಿಗಳಲ್ಲಿ ಯಶಸ್ಸು ಸಾಧ್ಯ ಎಂದೆನ್ನಬಹುದು.
ಉತ್ತರ ಸಿಗದ ಸೋಲು
ನಾಕೌಟ್ ಹಂತದಲ್ಲಿ ಭಾರತದ ಬಹುತೇಕ ಸೋಲುಗಳು ಯಾವ ಕಾರಣದಿಂದ ಬಂದಿವೆ ಎನ್ನುವುದಕ್ಕೆ ಉತ್ತರವೇ ಇಲ್ಲ. ಅದೇ ಟೂರ್ನಿಯ ಲೀಗ್ ಹಂತದಲ್ಲಿ ಅದೇ ಎದುರಾಳಿಯ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರೂ, ನಾಕೌಟ್ ಹಂತದಲ್ಲಿ ಅದೇ ತಂಡ ಎದುರಾಳಿಯಾದಾಗ ಕೆಟ್ಟ ಸೋಲುಗಳನ್ನು ಕಂಡಿದೆ. ಮೆನ್ ಅಥವಾ ವುಮೆನ್ ಇನ್ ಬ್ಲ್ಯೂ ಸೋಲಿಗೆ ತಂಡದ ಮೇಲಿನ ಅತಿಯಾದ ಒತ್ತಡವೇ ಕಾರಣ ಎಂದು ಹೇಳಬಹುದಾದರೂ ಇದೇ ಕಾರಣ ಎಂದು ಹೇಳುವ ಹಾಗಿಲ್ಲ. 2020ರ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನೊಂದಿಗೆ ಮಹಿಳಾ ತಂಡ ಸತತ ಮೂರನೇ ಬಾರಿಗೆ ಐಸಿಸಿ ಟೂರ್ನಿಯ ಪ್ರಮುಖ ನಾಕೌಟ್ ಪಂದ್ಯದಲ್ಲಿ ಸೋತಂತಾಗಿದೆ.
ಬೆಂಬಿಡದ ಐಸಿಸಿ ಟೂರ್ನಿ ಸೋಲು
ದ್ವಿಪಕ್ಷೀಯ ಸರಣಿಗಳಲ್ಲಿ ಅತ್ಯುತ್ತಮ ಆಟವಾಡುವ ಟೀಮ್ ಇಂಡಿಯಾ, ಐಸಿಸಿ ಟೂರ್ನಿಯ ಒತ್ತಡವನ್ನು ನಿಭಾಯಿಸುವಲ್ಲಿ ದೊಡ್ಡ ಮಟ್ಟದ ವೈಫಲ್ಯ ಕಂಡಿದೆ. 2015ರ ಏಕದಿನ ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ ಹಾಗೂ 2020ರ ಮಹಿಳೆಯರ ಟಿ20 ವಿಶ್ವಕಪ್. ಈ ಮೂರೂ ಟೂರ್ನಿಗಳಲ್ಲಿ ಭಾರತ 2ನೇ ಶ್ರೇಷ್ಠ ತಂಡ ಎನಿಸಿದೆ. ಇಲ್ಲಿನ ಫೈನಲ್ ಪಂದ್ಯಗಳ ಕೆಲವೊಂದು ಹಂತದಲ್ಲಿ ಎಚ್ಚರಿಕೆಯ ಆಟವಾಡಿದ್ದರೆ, ಗೆಲುವಿನ ಎಲ್ಲ ಲಕ್ಷಣವೂ ಭಾರತ ತಂಡಕ್ಕಿತ್ತು. ಆದರೆ, ಇದು ಸಾಧ್ಯವಾಗಲಿಲ್ಲ.
2016ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಜಸ್ಪ್ರೀತ್ ಬುಮ್ರಾ ಎರಡು ನೋಬಾಲ್ ಹಾಗೂ ಎರಡು ಕ್ಯಾಚ್ ಕೈಚೆಲ್ಲಿದ್ದರು. ಇಂಥ ಕೆಲವೊಂದು ಪ್ರಮಾದಗಳು ನಾಕೌಟ್ ಪಂದ್ಯಗಳಲ್ಲಿ ಆಗಿವೆ. 2010ರಿಂದ ಕ್ರಿಕೆಟ್ನಲ್ಲಿ ಅತ್ಯಂತ ಸ್ಥಿರ ನಿರ್ವಹಣೆ ತೋರಿದ ತಂಡ ಭಾರತವಾಗಿದ್ದರೂ, ಐಸಿಸಿ ಟೂರ್ನಿಯ ನಿರ್ವಹಣೆ ತಂಡದ ಕಪು್ಪಚುಕ್ಕೆ ಎನಿಸಿದೆ.