ವೈಭವ್​ಗೆ ಅವಕಾಶಕ್ಕೇನೂ ಕಮ್ಮಿಯಿಲ್ಲ! ಟೀಮ್ ಇಂಡಿಯಾ ಓಪನರ್ಸ್​ ಸಂಜು, ಅಭಿಷೇಕ್​ಗೆ ಲಂಕಾ ದಿಗ್ಗಜನ ಸಾಥ್​ | Vaibhav Sooryavanshi

ಇದೇ ತಂಡದಲ್ಲಿ ಸ್ಥಾನ ಪಡೆದಿದ್ದ ವೈಭವ್​ ಸೂರ್ಯವಂಶಿಗೆ ಒಂದೇ ಒಂದು ಪಂದ್ಯದಲ್ಲಿ ಆಡಲು ಮ್ಯಾನೇಜ್​ಮೆಂಟ್ ಅವಕಾಶ ಕೊಡಲಿಲ್ಲ. ಈ​ ಬಗ್ಗೆ ಅನೇಕ ಕ್ರಿಕೆಟ್​ ಪ್ರೇಮಿಗಳು ಮತ್ತು ಮಾಜಿ ಕ್ರಿಕೆಟಿಗರು ತೀವ್ರ ಟೀಕೆ, ಬೇಸರ ಹೊರಹಾಕಿದರು.
VaibhavSooryavanshi
ವೈಭವ್​ಗೆ ಅವಕಾಶಕ್ಕೇನೂ ಕಮ್ಮಿಯಿಲ್ಲ
Published on

ಕೊಲಂಬೊ: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಯಾರಿಗೆ ಗೊತ್ತಿಲ್ಲ ಹೇಳಿ? ಕೇವಲ 15 ವರ್ಷಕ್ಕೆ ಸಾಲು ಸಾಲು ದಾಖಲೆಗಳನ್ನು ಮುರಿದು, ತನ್ನದೇ ಹೊಸ ಇತಿಹಾಸ ಸೃಷ್ಟಿಸುತ್ತಿರುವ ಈ ಸ್ಟಾರ್​ ಬ್ಯಾಟ್ಸ್​ಮನ್​ನ್ನು ಹೊಗಳಿ, ಕೊಂಡಾಡದವರೇ ಇಲ್ಲ. ಆ ಮಟ್ಟಿಗೆ ಕಿರಿಯ ವಯಸ್ಸಿಗೆ ಅಪಾರ ಸಾಧನೆಗಳನ್ನು ಮಾಡಿದ್ದಾರೆ ವೈಭವ್​. ಬ್ಯಾಕ್​ ಟು ಬ್ಯಾಕ್​ ಅವಕಾಶಗಳನ್ನು ಪಡೆಯುತ್ತಿರುವ ಬೇಬಿ ಬಾಸ್​ ಬಗ್ಗೆ ಶ್ರೀಲಂಕಾದ ಮಾಜಿ ಹಿರಿಯ ಕ್ರಿಕೆಟಿಗ ಸನತ್​ ಜಯಸೂರ್ಯ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಆಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟರ್​​ಗಳಾದ ಸಂಜು ಸ್ಯಾಮ್ಸನ್​ ಮತ್ತು ಅಭಿಷೇಕ್ ಶರ್ಮ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಇದೇ ತಂಡದಲ್ಲಿ ಸ್ಥಾನ ಪಡೆದಿದ್ದ ವೈಭವ್​ ಸೂರ್ಯವಂಶಿಗೆ ಒಂದೇ ಒಂದು ಪಂದ್ಯದಲ್ಲಿ ಆಡಲು ಮ್ಯಾನೇಜ್​ಮೆಂಟ್ ಅವಕಾಶ ಕೊಡಲಿಲ್ಲ. ಈ​ ಬಗ್ಗೆ ಅನೇಕ ಕ್ರಿಕೆಟ್​ ಪ್ರೇಮಿಗಳು ಮತ್ತು ಮಾಜಿ ಕ್ರಿಕೆಟಿಗರು ತೀವ್ರ ಟೀಕೆ, ಬೇಸರ ಹೊರಹಾಕಿದರು.

ಈಗ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಜಯಸೂರ್ಯ, ವೈಭವ್​ ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್​ ಆಟಗಾರ. ಹೀಗಿರುವಾಗ, ಅವರನ್ನು ತರಾತುರಿಯಲ್ಲಿ ತಂಡಕ್ಕೆ ಕರೆತರುವ ಅಗತ್ಯವಿಲ್ಲ. ಸೂರ್ಯವಂಶಿಯ ಆಟದ ಶೈಲಿ ವಿಭಿನ್ನವಾಗಿದ್ದು, ಆತನಿಗೆ ಟೀಮ್ ಇಂಡಿಯಾದಲ್ಲಿ ಆಡಲು ಇನ್ನೂ ಸಾಕಷ್ಟು ಸಮಯವಿದೆ. ವೈಭವ್‌ಗೆ ಅವಕಾಶಗಳು ಖಂಡಿತವಾಗಿಯೂ ಬರುತ್ತವೆ. ತಂಡದ ಆಯ್ಕೆ ಅಥವಾ ಬ್ಯಾಟಿಂಗ್ ಲೈನ್‌ಅಪ್ ಬಗ್ಗೆ ನಾನೇನೂ ಹೇಳಲ್ಲ ಎಂದರು.

ಇದನ್ನೂ ಓದಿ: ಏನಿದು ಕಸ್ತೂರಿ ರಂಗನ್​ ವರದಿ? ಕೇಂದ್ರ ಸರ್ಕಾರಕ್ಕೆ ಇದನ್ನು ಸಲ್ಲಿಸಿದ ಕಸ್ತೂರಿ ರಂಗನ್ ಯಾರು? ಇಲ್ಲಿದೆ ವಿವರ | Kasturirangan Report

ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಆರಂಭಿಕರಾಗಿ ಮುಂದುವರಿಯಲು ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಸ್ಥಿರ ಪ್ರದರ್ಶನ ಮುಂದುವರಿಸಬೇಕಿದೆ. ಆಟಗಾರರು ತಮ್ಮದೇ ಆದ ಪ್ರತಿಭೆಯನ್ನು ಹೊಂದಿದ್ದಾರೆ. ಅವರು ಕಠಿಣ ಪರಿಶ್ರಮ ಮತ್ತು ನಿರಂತರವಾಗಿ ಅಭ್ಯಾಸ ಮಾಡಬೇಕು. ಭಾರತದಲ್ಲಿ, ಒಬ್ಬರಿಗಿಂತ ಹೆಚ್ಚು ಆಟಗಾರರು ಸದಾ ಒಂದೇ ಸ್ಥಾನಕ್ಕಾಗಿ ಪೈಪೋಟಿ ಮಾಡುತ್ತಾರೆ. ಭಾರತದಲ್ಲಿನ ಕ್ರಿಕೆಟ್ ಉನ್ನತ ಗುಣಮಟ್ಟದ್ದಾಗಿದೆ. ಬಹುತೇಕ ಕ್ರಿಕೆಟಿಗರು ಮೂರೂ ಫಾರ್ಮೆಟ್​ಗಳಲ್ಲಿ ಉತ್ತಮ ಕ್ರಿಕೆಟ್ ಆಡುತ್ತಾರೆ ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net