

ದುಬೈ: ಟಿ20 ವಿಶ್ವಕಪ್ 7ನೇ ಆವೃತ್ತಿ ಮುಕ್ತಾಯಗೊಂಡ ಬೆನ್ನಲ್ಲೇ ಐಸಿಸಿ, ಟೂರ್ನಿಯ ತಂಡವನ್ನು ಪ್ರಕಟಿಸಿದೆ. ಸೂಪರ್-12ರ ಘಟ್ಟದಲ್ಲೇ ಹೊರಬಿದ್ದ ಭಾರತ ತಂಡದ ಒಬ್ಬ ಆಟಗಾರನೂ ತಂಡದಲ್ಲಿ ಸ್ಥಾನ ಪಡೆದಿಲ್ಲ. ಪಾಕಿಸ್ತಾನದ ಬಾಬರ್ ಅಜಮ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರೆ, ಚಾಂಪಿಯನ್ ಆಸ್ಟ್ರೇಲಿಯಾ ತಂಡದಿಂದ ಗರಿಷ್ಠ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.
ನಾಕೌಟ್‌ಗೇರಲು ವಿಫಲವಾಗಿದ್ದ ಶ್ರೀಲಂಕಾ (ಹಸರಂಗ, ಅಸಲಂಕಾ) ಮತ್ತು ದಕ್ಷಿಣ ಆಫ್ರಿಕಾ (ಮಾರ್ಕ್ರಮ್, ನೋಕಿಯ) ತಂಡದಿಂದಲೂ ತಲಾ ಇಬ್ಬರು ಆಟಗಾರರು ತಂಡದಲ್ಲಿದ್ದಾರೆ. ಸೆಮೀಸ್‌ನಲ್ಲಿ ಎಡವಿದ ಇಂಗ್ಲೆಂಡ್ (ಬಟ್ಲರ್, ಮೊಯಿನ್ ಅಲಿ) ತಂಡದಿಂದಲೂ ಇಬ್ಬರು ತಂಡದಲ್ಲಿದ್ದಾರೆ. ನಾಕೌಟ್ ಹಂತಕ್ಕೇರಲು ಶಕ್ತವಾಗದ ಭಾರತ ತಂಡದ ಯಾವ ಆಟಗಾರರೂ ಸ್ಥಿರ ನಿರ್ವಹಣೆ ತೋರದ ಕಾರಣ ಸ್ಥಾನ ಸಂಪಾದಿಸಲು ವಿಫಲರಾಗಿದ್ದಾರೆ. ಪಾಕಿಸ್ತಾನದ ವೇಗಿ ಶಹೀನ್ ಷಾ ಅಫ್ರಿದಿ ತಂಡದ 12ನೇ ಆಟಗಾರರಾಗಿದ್ದಾರೆ.
ಹಾಲಿ ಚಾಂಪಿಯನ್ ಆಗಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡದಿಂದಲೂ ಯಾವ ಆಟಗಾರನೂ ಸ್ಥಾನ ಪಡೆದಿಲ್ಲ. ಸರಣಿಶ್ರೇಷ್ಠ ಡೇವಿಡ್ ವಾರ್ನರ್, ಟೂರ್ನಿಯ ಪ್ರಧಾನ ಸುತ್ತಿನಿಂದ ಗರಿಷ್ಠ 13 ವಿಕೆಟ್ ಕಬಳಿಸಿದ ಸ್ಪಿನ್ನರ್ ಆಡಂ ಜಂಪಾ ಮತ್ತು ಫೈನಲ್‌ನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಜೋಶ್ ಹ್ಯಾಸಲ್‌ವುಡ್ ತಂಡದಲ್ಲಿ ಸ್ಥಾನ ಪಡೆದಿರುವ ಆಸೀಸ್ ಆಟಗಾರರಾಗಿದ್ದಾರೆ.
ವೀಕ್ಷಕವಿವರಣೆಕಾರರಾದ ಇಯಾನ್ ಬಿಷಪ್, ನಥಲಿ ಗರ್ಮನೋಸ್, ಶೇನ್ ವ್ಯಾಟ್ಸನ್ ಮತ್ತು ಪತ್ರಕರ್ತರಾದ ಲಾರೆನ್ಸ್ ಬೂತ್ ಮತ್ತು ಶಹಿದ್ ಹಶ್ಮಿ ಅವರನ್ನೊಳಗೊಂಡ ಸಮಿತಿಯು ಈ ತಂಡವನ್ನು ಆರಿಸಿದ್ದು, ಸೂಪರ್-12 ಹಂತದಿಂದ ಫೈನಲ್‌ವರೆಗಿನ ನಿರ್ವಹಣೆಯನ್ನಷ್ಟೇ ಪರಿಗಣಿಸಲಾಗಿದೆ.
ಐಸಿಸಿ ವಿಶ್ವಕಪ್ ತಂಡ: ಡೇವಿಡ್ ವಾರ್ನರ್, ಜೋಸ್ ಬಟ್ಲರ್, ಬಾಬರ್ ಅಜಮ್ (ನಾಯಕ), ಚರಿತ್ ಅಸಲಂಕಾ, ಏಡನ್ ಮಾರ್ಕ್ರಮ್, ಮೊಯಿನ್ ಅಲಿ, ವಾನಿಂದು ಹಸರಂಗ, ಆಡಂ ಜಂಪಾ, ಜೋಶ್ ಹ್ಯಾಸಲ್‌ವುಡ್, ಟ್ರೆಂಟ್ ಬೌಲ್ಟ್, ಅನ್ರಿಚ್ ನೋಕಿಯ. 12ನೇ ಆಟಗಾರ: ಶಹೀನ್ ಷಾ ಅಫ್ರಿದಿ.