

ಲಂಡನ್: ಕರೊನಾ ವೈರಸ್ ಭೀತಿಯಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರರು ಶ್ರೀಲಂಕಾ ಪ್ರವಾಸದ ವೇಳೆ ಯಾರಿಗೂ ಹಸ್ತ ಲಾಘವ ನೀಡದಿರಲು ನಿರ್ಧರಿಸಿದ್ದಾರೆ.
ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಇಂಗ್ಲೆಂಡ್ ತಂಡದ 10 ಆಟಗಾರರು ಮತ್ತು 4 ಸಿಬ್ಬಂದಿ ಹೊಟ್ಟೆನೋವು ಮತ್ತು ಫ್ಲುನಿಂದ ಬಳಲಿದ್ದರು. ಹೀಗಾಗಿ ಲಂಕಾ ಪ್ರವಾಸದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲು ಬಯಸಿದ್ದಾರೆ. 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡ ಮಂಗಳವಾರ ಕೊಲಂಬೊಗೆ ಬಂದಿಳಿದಿದೆ.
ಮಾರ್ಚ್ 19ರಿಂದ ಮೊದಲ ಟೆಸ್ಟ್ ನಡೆಯಲಿದೆ. ‘ದಕ್ಷಿಣ ಆಫ್ರಿಕಾದಲ್ಲಿ ಆರೋಗ್ಯ ಸಮಸ್ಯೆ ಕಾಡಿದ ಬಳಿಕ ಲಂಕಾದಲ್ಲಿ ನಾವು ಸ್ಪರ್ಶವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಲು ಬಯಸಿದ್ದೇವೆ. ನಮ್ಮ ವೈದ್ಯಕೀಯ ತಂಡವೂ ಇದೇ ಸೂಚನೆ ನೀಡಿದೆ’ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ತಿಳಿಸಿದ್ದಾರೆ.