ಅರ್ಷದೀಪ್​​ ಬೈಗುಳ… ಇಲ್ಲಿ ​ಸಂಜು ಮಾಡಿದ ತಪ್ಪಾದ್ರೂ ಏನು? ಸ್ಟಾರ್ ಕ್ರಿಕೆಟಿನಿಗೆ ಈ ಸ್ಥಿತಿ ಬರಬಾರದಿತ್ತು!

Sanju Samson
Published on

ನವದೆಹಲಿ: ದುಲೀಪ್ ಟ್ರೋಫಿ ಪಂದ್ಯದ ವೇಳೆ ಸಂಜು ಸ್ಯಾಮ್ಸನ್ ವಿರುದ್ಧ ಪೇಸ್ ಬೌಲರ್ ಅರ್ಷದೀಪ್ ಸಿಂಗ್ ಕೋಪಗೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಂಜು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಭಾರತ ಎ ವಿರುದ್ಧ ಇತ್ತೀಚೆಗೆ ನಡೆದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಸಂಜು ಹಾಗೂ ಅರ್ಷದೀಪ್ ಸಿಂಗ್ ಭಾರತ ಡಿ ತಂಡದಲ್ಲಿದ್ದರು. ಸಂಜು ಆಗಲಿ ಅಥವಾ ದೇವದತ್ ಪಡಿಕ್ಕಲ್​ ಆಗಲಿ ಅರ್ಷದೀಪ್ ಎಸೆತದಲ್ಲಿ ಖಲೀಲ್ ಅಹ್ಮದ್ ಕ್ಯಾಚ್ ಹಿಡಿಯಲು ಯತ್ನಿಸದಿರುವುದು ಅರ್ಷದೀಪ್​ ಆಕ್ರೋಶಕ್ಕೆ ಕಾರಣವಾಗಿದೆ. ಪಂದ್ಯ ಮುಗಿದ ಕೆಲ ದಿನಗಳ ನಂತರ ಈ ಘಟನೆ ಸಂಬಂಧಿಸಿದ ವಿಡಿಯೋ ಬೆಳಕಿಗೆ ಬಂದಿದ್ದು, ಅರ್ಷದೀಪ್ ಕೆಟ್ಟ ಮಾತುಗಳನ್ನಾಡುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.

ಭಾರತ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಶಮ್ಸ್ ಮುಲಾನಿ ಅವರ ಅರ್ಧಶತಕದ ನೆರವಿನಿಂದ ಭಾರತ ಎ ತಂಡ 77 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟದಲ್ಲಿ 260 ರನ್ ಗಳಿಸಿತು. ಅರ್ಷದೀಪ್ ಬೌಲಿಂಗ್ ಮಾಡಲು ಬಂದಾಗ, ಅವರ ಮೊದಲ ಎಸೆತ ಖಲೀಲ್ ಅಹ್ಮದ್ ಅವರ ಬ್ಯಾಟ್​ಗೆ ಚೆಂಡು ತಾಗಿ ಹಿಂದೆ ಹೋಯಿತು. ಆದರೆ ವಿಕೆಟ್ ಕೀಪರ್ ಸಂಜು ಮತ್ತು ಸ್ಲಿಪ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ದೇವದತ್ ಪಡಿಕ್ಕಲ್​ ನಡುವಿನ ಗೊಂದಲದಿಂದಾಗಿ ಚೆಂಡು ನೇರವಾಗಿ ಇಬ್ಬರ ನಡುವೆ ಬೌಂಡರಿ ಸೇರಿತು.

ಚೆಂಡನ್ನು ಹಿಡಿಯಲು ಇಬ್ಬರೂ ಪ್ರಯತ್ನಿಸದಿದ್ದಕ್ಕೆ ಕೋಪಗೊಂಡ ಅರ್ಷದೀಪ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಂಜು ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ತಂಡದಲ್ಲಿ ಸಂಜು ಅವರನ್ನು ಯಾರೂ ಗೌರವಿಸುವುದಿಲ್ಲ ಎಂದು ಹಲವರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಅಲ್ಲದೆ, ಸಂಜು ಮಾಡಿ ತಪ್ಪಾದರೂ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net