

ಟೋಕಿಯೋ: ಇಂದು ನಡೆದ ಪುರುಷರ ಜಾವೆಲಿನ್ ಥ್ರೋ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ, ಭಾರತದ ನೀರಜ್ ಚೋಪ್ರ ಪ್ರಥಮ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಜಪಾನ್ನ ಟೋಕಿಯೋ ಒಲಿಂಪಿಕ್ಸ್ನಲ್ಲಿ 23 ವರ್ಷದ ನೀರಜ್ 87.58 ಮೀಟರ್ ದೂರ ಎಸೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ನೀರಜ್ ಜಾವಲಿನ್ ಥ್ರೋ ಸ್ಫರ್ಧೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 120 ವರ್ಷಗಳ ಬಳಿಕ ಭಾರತಕ್ಕೆ ಅಥ್ಲೀಟ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 23 ವರ್ಷದ ನೀರಜ್ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಹಾಗೂ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದರು. ಆದರೆ ಮೂರನೇ ಪ್ರಯತ್ನ 76.79 ಮೀ. ಎಸೆದಿದ್ದರು. ಇದರಲ್ಲಿ ಎರಡು ಸುತ್ತು ನೀರಜ್ ಅವರೇ ಮುಂಚೂಣಿ ಸ್ಥಾನ ಕಾಯ್ದಿರಿಸಿಕೊಂಡಿದ್ದರು.
ಇನ್ನು ಎರಡನೇ ಪ್ರಯತ್ನದಲ್ಲಿ ಎಲ್ಲರಿಗಿಂತಲೂ ಹೆಚ್ಚು ದೂರ ಜಾವೆಲಿನ್ ಎಸೆದಿದ್ದರಿಂದ ಪ್ರಥಮ ಸ್ಥಾನ ಪಡೆದು, ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಈ ಹಿಂದೆ 2018ರ ಏಷ್ಯನ್ ಗೇಮ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು.