

ಬೆಂಗಳೂರು: ಕನ್ನಡತಿ ನಿಕಿ ಪ್ರಸಾದ್ ಮುಂದಿನ ವರ್ಷ ಜನವರಿ 18ರಿಂದ ಫೆಬ್ರವರಿ 2ರವರೆಗೆ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ 2ನೇ ಆವೃತ್ತಿಯ 19 ವಯೋಮಿತಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗೆ ನಡೆದ 19 ವಯೋಮಿತಿ ಏಷ್ಯಾಕಪ್ನಲ್ಲಿ ಭಾರತ, ನಿಕಿ ಸಾರಥ್ಯದಲ್ಲೇ ಚಾಂಪಿಯನ್ ಪಟ್ಟವೇರಿತ್ತು. ಮಿಥಿಲಾ ವಿನೋದ್ ತಂಡದಲ್ಲಿ ಸ್ಥಾನ ಪಡೆದಿರುವ ಮತ್ತೋರ್ವ ಕನ್ನಡತಿಯಾಗಿದ್ದಾರೆ.
ಕಿರಿಯರ ಏಷ್ಯಾಕಪ್ ಗೆದ್ದ ಬಹುತೇಕ ತಂಡವನ್ನೇ ವಿಶ್ವಕಪ್ಗೂ ಉಳಿಸಿಕೊಳ್ಳಲಾಗಿದ್ದು, 15 ವರ್ಷದ ವೇಗಿ ನಂದನಾ ಎಸ್. ಬದಲಿಗೆ ವೈಷ್ಣವಿ ಎಸ್. ಸೇರ್ಪಡೆಯೊಂದೇ ಏಕೈಕ ಬದಲಾವಣೆಯಾಗಿದೆ. ಸನಿಕಾ ಚಾಲ್ಕೆ ಉಪನಾಯಕಿಯಾಗಿದ್ದು, ಜಿ. ಕಮಲಿನಿ ಮತ್ತು ಭವಿಕಾ ಅಹಿರೆ ತಂಡದಲ್ಲಿರುವ ಇಬ್ಬರು ವಿಕೆಟ್ ಕೀಪರ್ಗಳಾಗಿದ್ದಾರೆ.
16 ತಂಡಗಳ ಟೂರ್ನಿಯಲ್ಲಿ 4 ಗುಂಪುಗಳಿದ್ದು, ಭಾರತ ತಂಡ ಆತಿಥೇಯ ಮಲೇಷ್ಯಾ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಜತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಚೊಚ್ಚಲ ಆವೃತ್ತಿಯ ಚಾಂಪಿಯನ್ ಭಾರತ ಈ ಬಾರಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದ್ದು, ಜನವರಿ 19ರಂದು ಮೊದಲ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಆಡಲಿದೆ.
ಭಾರತ ತಂಡ: ನಿಕಿ ಪ್ರಸಾದ್ (ನಾಯಕಿ), ಸನಿಕಾ ಚಾಲ್ಕೆ (ಉಪನಾಯಕಿ), ಜಿ. ತ್ರಿಷಾ, ಕಮಲಿನಿ ಜಿ, ಭವಿಕಾ ಅಹಿರೆ, ಈಶ್ವರಿ ಅವಸರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪುರಾಣಿಕಾ ಸಿಸೋಡಿಯಾ, ಕೇಸರ್ ಧೃತಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಂಡಿ ಶಬ್ನಮ್, ವೈಷ್ಣವಿ ಎಸ್.
ಮೀಸಲು ಆಟಗಾರ್ತಿಯರು: ನಂದನಾ ಎಸ್, ಇರಾ ಜೆ, ಆನಂದಿ ಟಿ.