

ದುಬೈ: ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಎರಡೂ ಪಂದ್ಯಗಳಲ್ಲಿ ಸೋಲು ಕಂಡ ನಡುವೆಯೂ ಭಾರತ ತಂಡ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶ ಕಂಡಿದೆ. ಭಾರತ ಒಟ್ಟು 116 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ಗಿಂತ 6 ಅಂಕಗಳ ಮುನ್ನಡೆಯಲ್ಲಿದೆ. 108 ಅಂಕಗಳೊಂದಿಗೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.
ಕಿವೀಸ್ ಪ್ರವಾಸದ 0-2 ಸರಣಿ ಸೋಲು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಭಾರತ ತಂಡದ ಮೊಟ್ಟಮೊದಲ ಸರಣಿ ಸೋಲು ಎನಿಸಿದೆ. ತೀರಾ ಕೆಟ್ಟ ನಿರ್ವಹಣೆ ತೋರಿದ ನಾಯಕ ವಿರಾಟ್ ಕೊಹ್ಲಿ, ಅದರ ನಡುವೆಯೂ ನಂ.2 ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶ ಕಂಡಿದ್ದಾರೆ.
ಟಾಮ್ ಬ್ಲಂಡೆಲ್ ಆಡಿದ ನಾಲ್ಕು ಇನಿಂಗ್ಸ್ಗಳಿಂದ 117 ರನ್ ಬಾರಿಸಿದ್ದು, 1 ಅರ್ಧಶತಕವೂ ಸೇರಿದೆ. ಇದರಿಂದಾಗಿ ಅವರು 27 ಸ್ಥಾನ ಏರಿಕೆ ಕಂಡು 46ನೇ ಸ್ಥಾನದಲ್ಲಿದ್ದಾರೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಪದಾರ್ಪಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಪರವಾಗಿ ಆಡಿದ ಪೃಥ್ವಿ ಷಾ, ಕ್ರೖೆಸ್ಟ್ಚರ್ಚ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಕರ್ಷಕ 54 ರನ್ ಸಿಡಿಸಿದ್ದರು. ಇದರಿಂದ 17 ಸ್ಥಾನ ಏರಿಕೆ ಕಂಡು 76ನೇ ಸ್ಥಾನ ಸಂಪಾದಿಸಿದ್ದಾರೆ.
ಸ್ಮಿತ್ ನಂ.1 ಬ್ಯಾಟ್ಸ್ಮನ್: ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕೊಹ್ಲಿಗಿಂತ 25 ಅಂಕಗಳ ಮುನ್ನಡೆಯಲ್ಲಿ ದ್ದಾರೆ. ಸ್ಮಿತ್ರ ಸಹ ಆಟಗಾರ ಮಾರ್ನಸ್ ಲಬುಶೇನ್, ಒಂದು ಸ್ಥಾನ ಏರಿಕೆಯೊಂದಿಗೆ 3ನೇ ಸ್ಥಾನ ಸಂಪಾದಿಸಿದ್ದಾರೆ. ಕಿವೀಸ್ನ ನಾಯಕ ಕೇನ್ ವಿಲಿಯಮ್ಸನ್ರ ಸ್ಥಾನವನ್ನು ಲಬುಶೇನ್ ಅಲಂಕರಿಸಿದ್ದಾರೆ.
ಅಗ್ರ 10ರಿಂದ ಮಯಾಂಕ್ ಔಟ್
ಟೆಸ್ಟ್ ಸರಣಿಯಲ್ಲಿ ಕೇವಲ 1 ಅರ್ಧಶತಕ ಬಾರಿಸಲು ಯಶ ಕಂಡಿದ್ದ ಕರ್ನಾಟಕದ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್, ಒಂದು ಸ್ಥಾನ ಕುಸಿತ ಕಂಡು 11ನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ಅಗ್ರ 10 ಆಟಗಾರರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಮಯಾಂಕ್ರ ಸ್ಥಾನವನ್ನು ಪಡೆದಿದ್ದಾರೆ. ಪೂಜಾರ ಏಳನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಜಸ್ಪ್ರೀತ್ಬುಮ್ರಾಗೆ 7ನೇ ಸ್ಥಾನ
ಬೌಲರ್ಗಳ ಪಟ್ಟಿಯಲ್ಲಿ ಸರಣಿಶ್ರೇಷ್ಠ ಗೌರವ ಪಡೆದ ಟಿಮ್ ಸೌಥಿ, ಎರಡು ಸ್ಥಾನಗಳ ಏರಿಕೆಯೊಂದಿಗೆ 4ನೇ ಸ್ಥಾನ ಪಡೆದಿದ್ದರೆ, ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ತಲಾ 4 ಸ್ಥಾನಗಳ ಏರಿಕೆ ಕಾಣುವ ಮೂಲಕ ಕ್ರಮವಾಗಿ 7 ಹಾಗೂ 9ನೇ ಸ್ಥಾನ ಪಡೆದಿದ್ದಾರೆ. ಕೈಲ್ ಜೇಮಿಸನ್ 80ನೇ ಸ್ಥಾನದಿಂದ 43ನೇ ಸ್ಥಾನಕ್ಕೆ ಏರಿದ್ದಾರೆ. ಬೌಲಿಂಗ್-ಬ್ಯಾಟಿಂಗ್ನಲ್ಲಿ ಭಾರತವನ್ನು ಕಾಡಿದ ಜೇಮಿಸನ್ ಆಲ್ರೌಂಡರ್ಸ್ ರ್ಯಾಂಕಿಂಗ್ನಲ್ಲಿ 26 ಸ್ಥಾನ ಏರಿಕೆಯೊಂದಿಗೆ 22ನೇ ಸ್ಥಾನ ಪಡೆದಿದ್ದಾರೆ.