

ವೆಲ್ಲಿಂಗ್ಟನ್: ಗಾಯದಿಂದಾಗಿ ಪ್ರವಾಸಿ ಭಾರತ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಿಂದ ಹೊರಗುಳಿದಿದ್ದ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್, ಟೆಸ್ಟ್ ಸರಣಿಗೆ ಫಿಟ್ ಆಗಿದ್ದಾರೆ. ಭಾರತದ 2 ಪಂದ್ಯಗಳ ಟೆಸ್ಟ್ ಸರಣಿಗೆ ಬೌಲ್ಟ್, 13 ಸದಸ್ಯರ ಕಿವೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತಿಬ್ಬರು ಪ್ರಮುಖ ವೇಗಿಗಳಾದ ಲಾಕಿ ಫರ್ಗ್ಯುಸನ್ ಮತ್ತು ಮ್ಯಾಟ್ ಹೆನ್ರಿ ಇನ್ನೂ ಸಂಪೂರ್ಣ ಫಿಟ್ ಆಗದ ಕಾರಣ ತಂಡಕ್ಕೆ ಮರಳಿಲ್ಲ.
ಇತ್ತೀಚೆಗೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ 6.8 ಅಡಿ ಎತ್ತರದ ವೇಗಿ ಕೈಲ್ ಜೇಮಿಸನ್ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಮುಂಬೈ ಮೂಲದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆಗಿದ್ದಾರೆ. ಸೀಮಿತ ಓವರ್ ತಂಡದಲ್ಲಿದ್ದ ಸ್ಪಿನ್ನರ್ಗಳಾದ ಇಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕಾಲಿನ್ ಡಿ ಗ್ರಾಂಡ್ಹೋಮ್ ಜತೆಗೆ ಡೆರಿಲ್ ಮಿಚೆಲ್ ತಂಡದಲ್ಲಿರುವ ಆಲ್ರೌಂಡರ್ ಆಗಿದ್ದಾರೆ. ಟಾಮ್ ಲಾಥಮ್ ಜತೆಗೆ ಟಾಮ್ ಬ್ಲಂಡೆಲ್ ಆರಂಭಿಕ ಜೋಡಿಯಾಗಿರುತ್ತಾರೆ.
ಕಳೆದ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಬೌಲ್ಟ್ ಗಾಯಗೊಂಡಿದ್ದರು. ಇದೀಗ ಅವರ ಪುನರಾಗಮನ ಕಿವೀಸ್ ಟೆಸ್ಟ್ ತಂಡಕ್ಕೆ ಬಲ ತುಂಬಿದೆ. ಫರ್ಗ್ಯುಸನ್ ಕೂಡ ಆಸೀಸ್ ವಿರುದ್ಧದ ಸರಣಿಯಲ್ಲೇ ಗಾಯಗೊಂಡಿದ್ದರೂ, ಇನ್ನೂ ಸಂಪೂರ್ಣ ಚೇತರಿಕೆ ಕಂಡಿಲ್ಲ. ಕಿವೀಸ್ ಟೆಸ್ಟ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್ಹೋಮ್ ಕೈಲ್ ಜೇಮಿಸನ್, ಟಾಮ್ ಲಾಥಮ್ ಡೆರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಟ್ಲಿಂಗ್.
ರಾಸ್ ಟೇಲರ್ಗೆ 100ನೇ ಟೆಸ್ಟ್ ಪಂದ್ಯದ ಸಂಭ್ರಮ: ಅನುಭವಿ ಬ್ಯಾಟ್ಸ್ಮನ್ ರಾಸ್ ಟೇಲರ್ಗೆ ವೆಲ್ಲಿಂಗ್ಟನ್ ಪಂದ್ಯ, 100ನೇ ಟೆಸ್ಟ್ ಆಗಿರಲಿದೆ. ಈ ಮೂಲಕ ಅವರು ಎಲ್ಲ 3 ಕ್ರಿಕೆಟ್ ಪ್ರಕಾರದಲ್ಲೂ 100 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಆಟಗಾರ ಎನಿಸಲಿದ್ದಾರೆ. ಈ ಮುನ್ನ ಭಾರತ ವಿರುದ್ಧದ ಸರಣಿಯಲ್ಲೇ ಅವರು 100 ಟಿ20 ಪಂದ್ಯ ಆಡಿದ ಸಾಧನೆ ಮಾಡಿದ್ದರು. 35 ವರ್ಷದ ಟೇಲರ್ 231 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಟೇಲರ್ ಕಿವೀಸ್ ಪರ 100 ಟೆಸ್ಟ್ ಆಡಿದ 4ನೇ ಆಟಗಾರ ಎನಿಸಲಿದ್ದಾರೆ. ಸ್ಟೀಫನ್ ಫ್ಲೆಮಿಂಗ್, ಬ್ರೆಂಡನ್ ಮೆಕ್ಕಲಂ, ವೆಟ್ಟೋರಿ ಮೊದಲ ಮೂವರು.